ADVERTISEMENT

ದೆಹಲಿ ಅತ್ಯಾಚಾರ ಸಂತ್ರಸ್ತೆ ಭೇಟಿಗೆ ಅವಕಾಶ ನಿರಾಕರಣೆ: ಸ್ವಾತಿ ಮಾಲೀವಾಲ್ ಧರಣಿ

ಪಿಟಿಐ
Published 21 ಆಗಸ್ಟ್ 2023, 17:19 IST
Last Updated 21 ಆಗಸ್ಟ್ 2023, 17:19 IST
   

ನವದೆಹಲಿ: ದೆಹಲಿ ಸರ್ಕಾರಿ ಅಧಿಕಾರಿಯಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಆರೋಪಿಸಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಆಸ್ಪತ್ರೆಯಲ್ಲಿ ಧರಣಿ ಕುಳಿತ ಘಟನೆ ನಡೆದಿದೆ.

ದೆಹಲಿಯ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರೇಮೋದಯ್ ಖಾಖಾ ಎಂಬ ಅಧಿಕಾರಿ ನವೆಂಬರ್ 2020ರಿಂದ ಜನವರಿ 2021ರ ನಡುವೆ ಹಲವು ಬಾರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗಂಡನ ಈ ಹೇಯ ಕೃತ್ಯಕ್ಕೆ ಸಾಥ್ ನೀಡಿದ್ದ ಹೆಂಡತಿ, ಬಾಲಕಿಗೆ ಗರ್ಭಪಾತದ ಔಷಧಿ ನೀಡುತ್ತಿದ್ದಳು ಎಂದು ವರದಿ ತಿಳಿಸಿದೆ.

ಅಧಿಕಾರಿ ಖಾಖಾ ಮತ್ತು ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ADVERTISEMENT

ಈ ನಡುವೆ ಸಂತ್ರಸ್ತ ಬಾಲಕಿಯನ್ನು ಭೇಟಿ ಮಾಡಲು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಆಸ್ಪತ್ರೆ ಸಿಬ್ಬಂದಿ ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಭೇಟಿಗೆ ಅವಕಾಶ ನಿರಾಕರಣೆ ವಿರೋಧಿಸಿ ಧರಣಿ ನಡೆಸುತ್ತಿದ್ದ ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿಯಾದ ಆಸ್ಪತ್ರೆಯ ನಿರ್ದೇಶಕರು, ಒಳಗಡೆ ಡಿಸಿಪಿ ಮತ್ತು ಎಸಿಪಿ ತನಿಖೆ ನಡೆಸುತ್ತಿದ್ದು, ತಮ್ಮನ್ನು ಒಳಗೆ ಬಿಡದಂತೆ ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿರುವುದಾಗಿ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಆಯೋಗವು ದೆಹಲಿ ಪೊಲೀಸ್ ಮತ್ತು ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸೇವಾ ಇಲಾಖೆಗಳಿಗೆ ನೋಟಿಸ್ ನೀಡಿದ್ದು, ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಎಫ್‌ಐಆರ್ ದಾಖಲಾಗಿ ಎಂಟು ದಿನಗಳಾದರೂ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸದೇ ಇದ್ದದ್ದು ಆಘಾತಕಾರಿ ಎಂದು ಮಾಲೀವಾಲ್ ಹೇಳಿದ್ದಾರೆ.

‘ದೆಹಲಿ ಪೊಲೀಸರ ಆದೇಶದ ಮೇರೆಗೆ ಸಂತ್ರಸ್ತೆಯನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ. ನಾನು ಸಂತ್ರಸ್ತೆಯನ್ನು ಭೇಟಿ ಮಾಡಿಯೇ ತೀರುತ್ತೇನೆ. ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.