ADVERTISEMENT

ಉಚಿತ ಲಸಿಕೆ ಪೂರೈಕೆ, ತಡವಾದ ನಿರ್ಧಾರ: ಮಾಯಾವತಿ ಟೀಕೆ

ಪಿಟಿಐ
Published 9 ಜೂನ್ 2021, 6:45 IST
Last Updated 9 ಜೂನ್ 2021, 6:45 IST
ಮಾಯಾವತಿ
ಮಾಯಾವತಿ   

ಲಖನೌ: ‘18 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಎಲ್ಲ ನಾಗರಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ‘ಇದೊಂದು ಸೂಕ್ತ ಕ್ರಮವಾಗಿದೆ. ಆದರೆ, ತುಂಬಾ ವಿಳಂಬವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ‘ ಎಂದು ಹೇಳಿದ್ದಾರೆ.

‘ಜೂನ್ 21ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕೆಂಬ ಕೇಂದ್ರ ನಿರ್ಧಾರ ಸ್ವಾಗತಾರ್ಹ. ಆದರೆ ಇದು ಬಹಳ ವಿಳಂಬವಾಗಿದೆ. ನಮ್ಮ ಪಕ್ಷ ಮೊದಲಿನಿಂದಲೂ ದೇಶದಲ್ಲಿರುವ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಈಗ ಲಸಿಕೆ ಪೂರೈಕೆ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಬೇಕಿದೆ‘ ಎಂದು ಮಾಯಾವತಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವೇಗವಾಗಿ ಹಾಗೂ ಹೆಚ್ಚಿನ ಜನರಿಗೆ ಲಸಿಕೆ ಹಾಕುವುದೊಂದೇ ಪರಿಹಾರ‘ ಎಂದು ಮಾಯಾವತಿ ಹೇಳಿದ್ದಾರೆ.

ADVERTISEMENT

ಸಾರ್ವಜನಿಕರಿಗೆ ಕೋವಿಡ್‌ – ಲಸಿಕೆ ನೀಡುವ ವಿಚಾರದಲ್ಲಿ ರಾಜಕೀಯ ಮಾಡದಂತೆ ಮಾಯಾವತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಲಸಿಕೆ ಹಾಕುವ ಹಾಗೂ ಹಾಕಿಸಿಕೊಳ್ಳುವ ವಿಷಯದಲ್ಲಿ ನಿರಾಕರಣೆ ಮತ್ತು ನಿರ್ಲಕ್ಷ್ಯ ಮಾಡುವುದು ನ್ಯಾಯಸಮ್ಮತವಲ್ಲ. ಹೀಗೆ ಮಾಡುವುದರಿಂದ ಅಪಾಯ ಎದುರಾಗಬಹುದು. ಲಸಿಕೆ ನೀಡುವುದು ತ್ವರಿತಗತಿಯಲ್ಲಿ ಸಾಗಲಿ. ಸಮಯ ವ್ಯರ್ಥ ಮಾಡದೇ, ಪಕ್ಷ ರಾಜಕಾರಣವನ್ನು ಬದಿಗಿಟ್ಟು ಲಸಿಕೆ ಪೂರೈಸುವುದರ ಬಗ್ಗೆ ಗಮನ ಹರಿಸುವುದು ಅವಶ್ಯಕವಾಗಿದೆ‘ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.