ನವದೆಹಲಿ: ‘ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಸೋಮವಾರ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ದಾಟಿದೆ. ಈ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆಯಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
‘ವಾಯುಭಾರ ಕುಸಿತದ ಪ್ರಭಾವದಿಂದಾಗಿ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಒಡಿಶಾ ಮತ್ತು ಛತ್ತೀಸಗಡದಲ್ಲಿ ಸೋಮವಾರ ಹಾಗೂ ಮಧ್ಯಪ್ರದೇಶದಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯುವ ಸಾಧ್ಯತೆಗಳಿವೆ’ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
‘ಮುಂದಿನ ಎರಡು ದಿನಗಳಲ್ಲಿಉತ್ತರ ಕೊಂಕಣ, ಮಧ್ಯ ಮಹಾರಾಷ್ಟ್ರದಲ್ಲೂ ಮಳೆಯಾಗುವ ಸಾಧ್ಯತೆಯಿದೆ’ ಎಂದು ಐಎಂಡಿ ತಿಳಿಸಿದೆ.
ಒಡಿಶಾ ಪ್ರವಾಹ ಭೀತಿ: ‘ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾದಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಭುವನೇಶ್ವರದಲ್ಲಿ 195 ಮಿ.ಮೀ ಮಳೆ ಸುರಿದಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ವಾಯುಭಾರ ಕುಸಿತವು ಬೆಳಿಗ್ಗೆ ಭದ್ರಕ್ ಜಿಲ್ಲೆಯ ಚಾಂದಬಲಿ ಕರಾವಳಿಯನ್ನು ದಾಟಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 13 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ.
ಸಂಬಲ್‌ಪುರ, ಡೋಗ್ರಾ, ಅಂಗುಲ್, ಸೋನೆಪುರ ಮತ್ತು ಬಾರ್ಗಡದಲ್ಲಿ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ನಿರಂತರ ಮಳೆಯಿಂದಾಗಿಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳು ಉಕ್ಕಿ ಹರಿಯುತ್ತಿದೆ. ಹೀಗಾಗಿ, ಕೇಂದ್ರ ಜಲ ಆಯೋಗವು ಹಲವು ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಿದೆ.
‘ಕಟಕ್, ಖೋರ್ಧಾ, ಪುರಿ, ಜಗತ್‌ಸಿಂಗ್‌ಪುರ, ಜರ್ಸುಗುಡ ಮತ್ತು ಬಲಾಂಗೀರ್ ನಲ್ಲಿಮಹಾನದಿ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲಿದೆ’ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.