ADVERTISEMENT

ದೀಪಾವಳಿ: ಪಟಾಕಿ ಆಸಕ್ತಿ ಕುಗ್ಗಿಸಿದ ಕೋವಿಡ್‌, ನಿರ್ಬಂಧ

ಜಾಲತಾಣದಲ್ಲಿ ಸಮೀಕ್ಷೆ: ಹೆಚ್ಚಿನನವರ ಪ್ರಕಾರ, ಪಟಾಕಿ ಸುಡುವುದು ದುಂದುವೆಚ್ಚ

ಪಿಟಿಐ
Published 2 ನವೆಂಬರ್ 2021, 12:18 IST
Last Updated 2 ನವೆಂಬರ್ 2021, 12:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಈ ಬಾರಿ ದೀಪಾವಳಿಯಲ್ಲಿ ಶಬ್ದದ ಅಬ್ಬರ ಹೆಚ್ಚಾಗಿ ಇರುವುದಿಲ್ಲ. ಪರಿಸರ ಮಾಲಿನ್ಯ, ಪಟಾಕಿ ಮಾರಾಟದ ಮೇಲೆ ಹೇರಿರುವ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಗೆ ಮೂರರಲ್ಲಿ ಎರಡು ಕುಟುಂಬ ಪಟಾಕಿ ಸುಡುವ ಚಿಂತನೆಯನ್ನೇ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಗಳಲ್ಲಿ ಪಟಾಕಿಗಳ ಮಾರಾಟದ ಮೇಲೆ ಹೇರಿರುವ ಕೆಲವೊಂದು ನಿರ್ಬಂಧಕ್ಕೆ ಶೇ 42ರಷ್ಟು ಬೆಂಬಲ ವ್ಯಕ್ತಪಡಿಸಿದ್ದರೆ, ಶೇ 53ರಷ್ಟು ಕುಟುಂಬಗಳು ನಿರ್ಬಂಧದ ಪರವಾಗಿ ಇಲ್ಲ. ಸಮುದಾಯ ಜಾಲತಾಣ ‘ಲೋಕಲ್‌ ಸರ್ಕಲ್‌’ ದೇಶದ ವಿವಿಧ ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು.

ಪಟಾಕಿಯನ್ನು ಸುಡುವುದರಿಂದ ಪರಿಸರ ಮಾಲಿನ್ಯವಾಗಲಿದೆ ಅಲ್ಲದೆ, ಇದೊಂದು ದುಂದುವೆಚ್ಚ ಎಂದು ಬಹುತೇಕ ಕುಟುಂಬಗಳು ಭಾವಿಸಿರುವುದು ಗಮನಾರ್ಹ ಎಂದು ಸಮೀಕ್ಷೆ ನಡೆಸಿದ ಸಂಸ್ಥೆಯು ತಿಳಿಸಿದೆ. ಸಮೀಕ್ಷೆಗಾಗಿ ದೇಶದ 371 ಜಿಲ್ಲೆಗಳಲ್ಲಿ ಒಟ್ಟು 28,000 ನಾಗರಿಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ.

ADVERTISEMENT

ಹಬ್ಬದ ಸಂಭ್ರಮ ಇಲ್ಲದಿರುವುದಕ್ಕೆ ಹೆಚ್ಚಿನ ಕುಟುಂಬಗಳು, ಕೋವಿಡ್‌ ಸಂದರ್ಭದಲ್ಲಿ ಕುಟುಂಬ ಸದಸ್ಯರು ಅಥವಾ ಆತ್ಮೀಯರನ್ನು ಕಳೆದುಕೊಂಡಿರುವುದು ಕಾರಣ. ಇಂಥ ಕುಟುಂಬಗಳ ಸಂಖ್ಯೆ ಶೇ 2 ರಿಂದ 3ರಷ್ಟು.

ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿ ಮೂರರಲ್ಲಿ ಎರಡು ಕುಟುಂಬಗಳು ಪಟಾಕಿ ಸುಡುವುದರ ವಿರುದ್ಧವಾಗಿವೆ. ಈ ಪ್ರಶ್ನೆಗೆ 9,363 ಪ್ರತಿಕ್ರಿಯೆಗಳು ದಾಖಲಾಗಿವೆ.

28 ಸಾವಿರ ಜನರು ಪ್ರತಿಕ್ರಿಯಿಸಿದ್ದ ಸಮೀಕ್ಷೆಯಲ್ಲಿ ಮೊದಲ ಪ್ರಶ್ನೆ, ಈ ದೀಪಾವಳಿಯಲ್ಲಿ ಪಟಾಕಿ ಸುಡುವ ಚಿಂತನೆ ಇದೆಯೇ ಎಂಬುದಾಗಿತ್ತು. ಶೇ 45ರಷ್ಟು ಜನರು ಇಲ್ಲ ಎಂದು, ಶೇ 15ರಷ್ಟು ಮಂದಿ ಸುಡುತ್ತೇವೆ ಎಂದು ಪ್ರತಿಕ್ರಿಯಿಸಿದರು. ಶೇ 11ರಷ್ಟು ಮಂದಿ ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿ ಸುಡುವುದಿಲ್ಲ ಎಂದರು.

ನಗರ/ಜಿಲ್ಲೆಯಲ್ಲಿ ಪಟಾಕಿ ಮಾರಾಟದ ಮೇಲೆ ನಿರ್ಬಂಧ ಇರುವುದರಿಂದ ನಮಗೆ ಬೇರೆ ಆಯ್ಕೆಯೇ ಇಲ್ಲ ಎಂದು ಶೇ 10ರಷ್ಟು ಮಂದಿ ಉತ್ತರಿಸಿದರೆ, ಈ ಪ್ರಶ್ನೆಯೇ ಉದ್ಭವಿಸದು ಎಂದು ಶೇ 8ರಷ್ಟು ಮಂದಿ ಹೇಳಿದ್ದಾರೆ.

ಶೇ 42ರಷ್ಟು ಜನರು ಇದು ದುಂದು ವೆಚ್ಚ ಎಂದಿದ್ದರೆ, ಶೇ 53ರಷ್ಟು ಜನರು ಪರಿಸರ ಮಾಲಿನ್ಯಕ್ಕೆ ಪಟಾಕಿಯೊಂದೇ ಕಾರಣವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗೆ ಶೇ 63ರಷ್ಟು ಪುರುಷರು, ಶೇ 37ರಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ ಶೇ 41ರಷ್ಟು 1ನೇ ಹಂತದ ನಗರಗಳು, ಶೇ 33ರಷ್ಟು ಜನರು 2ನೇ ಹಂತ ಹಾಗೂ ಶೇ 26ರಷ್ಟು ಜನರು ಮೂರನೇ ಹಂತ ಹಾಗೂ ಗ್ರಾಮೀಣ ಭಾಗದವರಾಗಿದ್ದಾರೆ.‌‌‌‌‌‌‌‌‌‌‌‌‌‌‌‌‌‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.