ADVERTISEMENT

ಕಲಾಪಕ್ಕೆ ಅಡ್ಡಿ: ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 20:20 IST
Last Updated 26 ಜುಲೈ 2021, 20:20 IST
ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ಬಂದರು– ಪಿಟಿಐ ಚಿತ್ರ
ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ಬಂದರು– ಪಿಟಿಐ ಚಿತ್ರ   

ನವದೆಹಲಿ:ಸಂಸತ್ತಿನ ಕಲಾಪಕ್ಕೆ ನಿರಂತರ ಅಡ್ಡಿಯಾಗುತ್ತಿರುವ ಬಗ್ಗೆ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡುಕಳವಳ ವ್ಯಕ್ತಪಡಿಸಿದ್ದಾರೆ. ‘ಗದ್ದಲದಿಂದಾಗಿ, ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಿದ್ದ 90ಕ್ಕೂ ಹೆಚ್ಚು ಸಂಸದರಿಗೆ ಅವಕಾಶ ಸಿಗದೇ ಹೋಯಿತು. ಇದರಿಂದಾಗಿ ನಾವು ದಿನದಿಂದ ದಿನಕ್ಕೆ ಅಸಹಾಯಕರಾಗುತ್ತಿದ್ದೇವೆ’ ಎಂದು ಸೋಮವಾರ ಹೇಳಿದರು.

ಪೆಗಾಸಸ್‌, ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ಸಂಸದರು ಘೋಷಣೆ ಕೂಗುತ್ತ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿದರು. ಈ ಸಂದರ್ಭದಲ್ಲಿ ಉಂಟಾದ ಗದ್ದಲದಿಂದ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಮುಂಗಾರು ಅಧಿವೇಶನ ಆರಂಭವಾದ ಜುಲೈ 19ರಿಂದ ಇಲ್ಲಿಯವರೆಗೆ, ಸೋಮವಾರದ 12 ಪ್ರಸ್ತಾಪಗಳು ಸೇರಿದಂತೆ ಶೂನ್ಯ ವೇಳೆಯ 69 ಪ್ರಸ್ತಾಪಗಳು ಹಾಗೂ 23 ವಿಶೇಷ ಪ್ರಸ್ತಾಪಗಳನ್ನು ಚರ್ಚೆಗೆ ಅಂಗೀಕರಿಸಲಾಗಿತ್ತು. ಆದರೆ, ನಿಲ್ಲದ ಗದ್ದಲದಿಂದಾಗಿ ಅದಕ್ಕೆ ಅವಕಾಶವಾಗಲಿಲ್ಲ’ ಎಂದರು.

ಸಂಜೆ ಐದರವರೆಗೆ ನಾಲ್ಕು ಬಾರಿ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಸದನ ಸೇರಿದಾಗಲೂ ಗದ್ದಲ ಮುಂದುವರಿದಿದ್ದರಿಂದ, ರಾಜ್ಯಸಭಾಧ್ಯಕ್ಷ ಸ್ಥಾನದಲ್ಲಿದ್ದ ಸಸ್ಮಿತ ಪಾತ್ರಾ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ADVERTISEMENT

ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದ್ದರಿಂದ ಪದೇ ಪದೇ ಕಲಾಪವನ್ನು ಮುಂದೂಡಬೇಕಾಯಿತು.

‘ಉನ್ನತ ಶಿಕ್ಷಣ ಆಯೋಗ ಸ್ಥಾಪನೆಗೆ ಮಸೂದೆ ರಚನೆ’: ನವದೆಹಲಿ (ಪಿಟಿಐ): ‘ಭಾರತ ಉನ್ನತ ಶಿಕ್ಷಣ ಆಯೋಗವನ್ನು (ಎಚ್‌ಇಸಿಐ) ಸ್ಥಾಪಿಸುವ ಸಲುವಾಗಿ ಶಿಕ್ಷಣ ಸಚಿವಾಲಯವು ಮಸೂದೆಯನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂ
ದ್ರ ಪ್ರಧಾನ್ ಅವರು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಸಚಿವಾಲಯವು ಸಂಪುಟದ ಅನುಮೋದನೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಅನ್ನು 2020ರ ಜುಲೈ 29ರಂದು ಘೋಷಿಸಿದೆ. ನೂತನ ನೀತಿಯು, ಭಾರತ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸುವಂತೆ ಸೂಚಿಸಿದೆ. ನಿಯಂತ್ರಣ, ಮಾನ್ಯತೆ, ಧನಸಹಾಯ ಮತ್ತು ಶೈಕ್ಷಣಿಕ ಗುಣಮಟ್ಟದ ವಿನ್ಯಾಸ ಎನ್ನುವ ನಾಲ್ಕು ಸ್ವತಂತ್ರ ಅಂಗಗಳು ಭಾರತ ಶಿಕ್ಷಣ ಆಯೋಗದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ’ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ.

‘ರೈತರ ಸಂದೇಶ ತಂದಿರುವೆ’

ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ಬಂದರು.

ಪಕ್ಷದ ಸಂಸದರೊಂದಿಗೆಸಂಸತ್ತಿಗೆ ಬಂದ ಅವರು, ಹೋರಾಟ ನಿರತ ರೈತರ ಸಂದೇಶ ತಂದಿರುವುದಾಗಿ ಹೇಳಿದರು. ‘ರೈತರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ. ಅವರ ಹೋರಾಟವನ್ನುಹತ್ತಿಕ್ಕಲಾಗುತ್ತಿದೆ’ ಎಂದು ಆರೋಪಿಸಿದ ಅವರು, ರೈತಸಮೂಹಕ್ಕೆ ಮಾರಕವಾದ ಕರಾಳ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಟ್ವೀಟ್‌ ಕೂಡ ಮಾಡಿರುವ ಅವರು, ‘ಒಂದು ವೇಳೆ ನೀವು, ಜಮೀನನ್ನು ಮಾರುವಂತೆ ರೈತರಿಗೆ ಒತ್ತಾಯ ಮಾಡಿದ್ದೇ ಆದಲ್ಲಿ ಆಗ ಈ ಟ್ರ್ಯಾಕ್ಟರ್ ಸಂಸತ್ತಿನೊಳಗೇ ಹೋಗಲಿದೆ. ನಾವು ಸತ್ಯದ ಬೆಳೆ ಬೆಳೆಯುತ್ತೇವೆ. ಕೃಷಿಗೆ ಮಾರಕವಾದ ಕಾಯ್ದೆಗಳನ್ನು ಹಿಂಪಡೆಯುತ್ತೇವೆ’ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 10 ಮಂದಿಯನ್ನು ಬಂಧಿಸಿ, ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.