ADVERTISEMENT

ಬಲವಾದ ಪ್ರಕರಣ ದಾಖಲಾದರೆ ಜಾಮೀನು ರದ್ದು ಮಾಡಬಹುದು: ಸುಪ್ರೀಂ ಕೋರ್ಟ್

ಪಿಟಿಐ
Published 16 ಜನವರಿ 2023, 19:37 IST
Last Updated 16 ಜನವರಿ 2023, 19:37 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಆರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್‌) ವಿಶೇಷ ಮತ್ತು ಬಲವಾದ ಪ್ರಕರಣವನ್ನು ಉಲ್ಲೇಖಿಸಿದ್ದಲ್ಲಿ ಆರೋಪಿಗೆ ನೀಡಿರುವ ಜಾಮೀನು ರದ್ದುಮಾಡಬಹುದು’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್‌.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಆರೋಪಿ ಎರ್ರಾ ಗಂಗಿ ರೆಡ್ಡಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ.ಆರ್‌.ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಇದರ ವಿಚಾರಣೆ ನಡೆಸಿತು.

‘ಆರೋಪ ಪಟ್ಟಿ ಸಲ್ಲಿಸಿದ ತಕ್ಷಣ ಆರೋಪಿಯ ಜಾಮೀನು ರದ್ದು ಮಾಡಲು ಆಗುವುದಿಲ್ಲ. ಚಾರ್ಜ್‌ಶೀಟ್‌ನಲ್ಲಿ ಬಲವಾದ ಪ್ರಕರಣ ಉಲ್ಲೇಖಿಸಿರಬೇಕು. ಅದು ಜಾಮೀನು ರಹಿತ ಅಪರಾಧ ಎಂಬುದು ನ್ಯಾಯಾಲಯಕ್ಕೆ ಮನದಟ್ಟಾಗಬೇಕು. ಹಾಗಾದಾಗ ಮಾತ್ರ ಜಾಮೀನು ರದ್ದು ಮಾಡಬಹುದು’ ಎಂದು ನ್ಯಾಯಪೀಠ ಹೇಳಿತು.

ADVERTISEMENT

‘ಸಿಬಿಐ ಸಲ್ಲಿಸಿರುವ ಅರ್ಜಿಯಲ್ಲಿ ವಿಶೇಷ ಪ್ರಕರಣ ಅಥವಾ ಅಂಶಗಳನ್ನು ಉಲ್ಲೇಖಿಸಿದ್ದರೆ ಅವುಗಳನ್ನು ಪರಿಗಣಿಸಿ’ ಎಂದು ತೆಲಂಗಾಣ ಹೈಕೋರ್ಟ್‌ಗೆ ಸೂಚಿಸಿತು.

ವೈವಾಹಿಕ ಅತ್ಯಾಚಾರ: ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸೂಚನೆ
ನವದೆಹಲಿ
: ವೈವಾಹಿಕ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇದಕ್ಕೆ ಸಂಬಂಧಿಸಿದ ಮೊದಲ ಬ್ಯಾಚ್‌ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ಫೆಬ್ರುವರಿ 15ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿತು. ಮಾರ್ಚ್‌ 21ರಿಂದ ಅಂತಿಮ ವಿಚಾರಣೆ ಆರಂಭಿಸುವುದಾಗಿ ಪ್ರಕಟಿಸಿತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರ ಅಡಿ ವೈವಾಹಿಕ ಅತ್ಯಾಚಾರವನ್ನು ಅಪರಾಧ ಮುಕ್ತಗೊಳಿಸುವ 2ನೇ ವಿನಾಯಿತಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಕಳೆದ ವರ್ಷ ಮೇ 11ರಂದು ಭಿನ್ನ ತೀರ್ಪು ನೀಡಿತ್ತು. ಇದರ ವಿರುದ್ಧ ಖುಷ್ಬೂ ಸೈಫಿ ಸಲ್ಲಿಸಿರುವ ಮೇಲ್ಮನವಿಯೂ ಈ ಅರ್ಜಿಗಳಲ್ಲಿದೆ.

ನ್ಯಾಯಮೂರ್ತಿಗಳಿಬ್ಬರ ತೀರ್ಪು ಭಿನ್ನವಾಗಿರುವುದರಿಂದ ವೈವಾಹಿಕ ಅತ್ಯಾಚಾರ ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ, ಈ ಪ್ರಕರಣದಲ್ಲಿ ಕಾನೂನಾತ್ಮಕ ಅಂಶಗಳು ಅಡಕವಾಗಿರುವುದರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಮೂರ್ತಿಗಳು ಅನುಮತಿಸಿದ್ದರು.

ಅತ್ಯಾಚಾರ: ಶಹನವಾಜ್‌ ಹುಸೇನ್ ಮೇಲ್ಮನವಿ ವಜಾ
ನವದೆಹಲಿ
: ಮಹಿಳೆ ದೂರು ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಲು ದೆಹಲಿ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಸೈಯದ್ ಶಹನವಾಜ್‌ ಹುಸೇನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.

‘ಈ ಬಗ್ಗೆ ನ್ಯಾಯಯುತ ತನಿಖೆ ಆಗಲಿದೆ. ಆರೋಪದಲ್ಲಿ ಹುರುಳಿಲ್ಲ ಎಂದಾದರೆ ದೋಷಮುಕ್ತರಾಗುತ್ತೀರಿ’ ಎಂದು ನ್ಯಾಯಮೂರ್ತಿಗಳಾದ ಎಸ್‌.ರವೀಂದ್ರ ಭಟ್, ದೀಪಂಕರ್ ದತ್ತಾ ಅವರಿದ್ದ ಪೀಠ ಹೇಳಿತು.

ಹುಸೇನ್ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಮುಕುಲ್‌ ರೋಹಟಗಿ ಮತ್ತು ಸಿದ್ಧಾರ್ಥ ಲೂತ್ರಾ ಅವರು, ಮಹಿಳೆಯು ಪದೇ ಪದೇ ದೂರು ದಾಖಲಿಸುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.