ದೆಹಲಿ ಮೆಟ್ರೊ
ನವದೆಹಲಿ: ದೆಹಲಿ ಮೆಟ್ರೊದ ನೀಲಿ ಮಾರ್ಗದಲ್ಲಿ ಕೇಬಲ್ ಕಳುವಾಗಿರುವುದರಿಂದ ಮೋತಿ ನಗರ ಹಾಗೂ ಕೀರ್ತಿ ನಗರ ನಿಲ್ದಾಣಗಳ ನಡುವೆ ಇಂದು (ಗುರುವಾರ) ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರವಾಗಿ ಪರದಾಡಿದರು.
ದ್ವಾರಕಾ ಪ್ರದೇಶವನ್ನು ವೈಶಾಲಿ ಜೊತೆ ಸಂಪರ್ಕಿಸುವ ಹಾಗೂ ನೊಯಿಡಾ ಸಿಟಿ ಸೆಂಟರ್‌ಗೆ ಕೊಂಡಿಯಾಗಿರುವ ಈ ಮಾರ್ಗವು ದೆಹಲಿ ಮೆಟ್ರೊದಲ್ಲಿ ಅತ್ಯಂತ ಜನದಟ್ಟಣೆಯನ್ನು ಹೊಂದಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಒಂದು ಲೇನ್‌ನಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ದೆಹಲಿ ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ ಎಂದಿನಂತೆಯೇ ಮೆಟ್ರೊ ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಮೋತಿ ನಗರ ಮತ್ತು ಕೀರ್ತಿ ನಗರ ನಡುವೆ ಸಿಗ್ನಲ್ ಕೇಬಲ್ ಕಳ್ಳತನವಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ನಿಲ್ದಾಣಗಳ ನಡುವೆ ರೈಲು ಕಡಿಮೆ ವೇಗದಲ್ಲಿ ಸಂಚರಿಸುತ್ತದೆ. ಇದರಿಂದ ಪ್ರಯಾಣಿಕರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಇದರಿಂದ ನಿಲ್ದಾಣ ಮತ್ತು ರೈಲಿನಲ್ಲಿ ಜನದಟ್ಟಣೆ ಹೆಚ್ಚಾಗಿತ್ತು ಎಂದು ಡಿಎಂಆರ್‌ಸಿ ಹೇಳಿದೆ.
‘ರಾಷ್ಟ್ರ ರಾಜಧಾನಿಯಲ್ಲಿ ಯಾವುದೂ ಸುರಕ್ಷಿತವಾಗಿಲ್ಲ’ ಎಂದು ಹೇಳುವ ಮೂಲಕ ಮೆಟ್ರೊ ರೈಲುಗಳ ಕೇಬಲ್ ಕಳ್ಳತನ ಪ್ರಕರಣ ಕುರಿತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ.
‘ಅಮಿತ್ ಶಾ ಜೀ, ದೆಹಲಿಯಲ್ಲಿ ಏನು ನಡೆಯುತ್ತಿದೆ? ದೆಹಲಿ ಮೆಟ್ರೊ ಕೇಬಲ್ ಕಳ್ಳತನವಾಗಿದೆ. ಇಲ್ಲಿ ಯಾವುದೂ ಸುರಕ್ಷಿತವಾಗಿಲ್ಲ. ಏನಾದರೂ ಕ್ರಮ ಕೈಗೊಳ್ಳಿ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.