
ನವದೆಹಲಿ; ದೆಹಲಿಯ ವಾಯುಮಾಲಿನ್ಯದ ವಿಚಾರವು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ‘ಮೀಮ್’ಗಳ ಮೂಲಕವೂ ಸದ್ದು ಮಾಡುತ್ತಿದೆ.
‘ವೆಡ್ಡಿಂಗ್ ವಿದ್ ಆಕ್ಸಿಜನ್ ಮಾಸ್ಕ್’ ಎಂಬ ವಿಡಿಯೊ ವೈರಲ್ ಆಗುತ್ತಿದೆ. ವಾಯಮಾಲಿನ್ಯಯುಕ್ತ ನಗರದಲ್ಲಿ ಸಂಗಾತಿಗಳಿಬ್ಬರು ಮಾಸ್ಕ್ ಧರಿಸಿಕೊಂಡು ಪ್ರೇಮಿಸುವ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಗಿ ವಿಡಿಯೊ ಮಾಡಲಾಗಿದೆ.
ಮದುಮಗನು ಮದುಮಗಳ ಮೇಲೆ ಹೂವು ಸುರಿಯುವ ಬದಲಾಗಿ, ಔಷಧದ ಲಕೋಟೆಗಳನ್ನು ಸುರಿಯುವ ದೃಶ್ಯವನ್ನು ಸೃಷ್ಟಿಸಲಾಗಿದೆ. ಭವ್ಯ ಅರಮನೆ ಅಥವಾ ಉದ್ಯಾನದ ಬದಲಿಗೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಲಿಂಡರ್ ಮತ್ತು ಇತರ ಉಪಕರಣಗಳ ಮಧ್ಯೆ ಫೋಟೊ ತೆಗೆಸಿಕೊಳ್ಳುವ ಮತ್ತು ಕೊನೆಯಲ್ಲಿ ಕೈಯಲ್ಲಿ ಮಾಸ್ಕ್ ಅನ್ನು ತೋರಿಸುವ ಮೂಲಕ ತಾವು ದೆಹಲಿ ನಾಗರಿಕರು ಎಂದು ತಿಳಿಸುವ ರೀತಿಯಲ್ಲಿ ವ್ಯಂಗ್ಯ ಮಾಡಲಾಗಿದೆ.
ದೆಹಲಿಯ ಗಾಳಿಯಲ್ಲಿ 10 ನಿಮಿಷ ಹಾರಾಡಿದ ಬಳಿಕ ‘ಸೂಪರ್‌ಮ್ಯಾನ್’ ಕೂಡ ಆಸ್ಪತ್ರೆಗೆ ದಾಖಲಾಗಿ ಮಾಸ್ಕ್ ಧರಿಸಬೇಕಾಗುತ್ತದೆ ಎಂಬಮೀಮ್ ಒಂದು ’ಎಕ್ಸ್’ನಲ್ಲಿದೆ.
‘ದೆಹಲಿಗೆ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವ ಪ್ರಯತ್ನವಾಗುತ್ತಿದೆ. ಮಾಲಿನ್ಯ ಮತ್ತು ಅಪರಾಧ ವ್ಯವಸ್ಥೆಯು 14ನೇ ಶತಮಾನದತ್ತ ಮರಳುತ್ತಿದೆ’ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
ರಾಜಕೀಯ ಮತ್ತು ಮಾಲಿನ್ಯವನ್ನು ಸಮೀಕರಿಸಿಕೊಂಡು ಟೀಕಿಸಿರುವ ನೆಟ್ಟಿಗರು, ‘ಅಬ್ ಕಿ ಬಾರ್, 1000 ಎಕ್ಯುಐ ಪಾರ್’ ಎಂದು ಪೋಸ್ಟ್ ಮಾಡಿದ್ದಾರೆ.
‘ಗಾಳಿಯ ಗುಣಮಟ್ಟ ತೀರಾ ಕಳಪೆ’
ದೇಶದ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ವಿಷಯುಕ್ತ ಗಾಳಿಯು ಪರದೆಯಂತೆ ಆವರಿಸಿತ್ತು. ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ. ಸಿಪಿಸಿಬಿ ದತ್ತಾಂಶಗಳ ಪ್ರಕಾರ ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) 345 ಇತ್ತು. ಗಾಳಿಯ ಗುಣಮಟ್ಟ ಸೂಚ್ಯಂಕವು ಭಾನುವಾರ ಮುಂಜಾನೆ ತೀವ್ರವಾಗಿ(391 ಎಕ್ಯುಐ) ಕುಸಿದಿತ್ತು. ಬಳಿಕ ಸ್ವಲ್ಪ ಸುಧಾರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.