
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಆವರಿಸುವ ಕೆಟ್ಟ ಹೊಗೆಯನ್ನು ಸ್ವಚ್ಛಗೊಳಿಸಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ, ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ನಮ್ಮ ರಾಜಕೀಯ ಮನಸ್ಥಿತಿಯನ್ನು ಬಿಟ್ಟು ನಾವೆಲ್ಲರೂ ಒಗ್ಗೂಡಿ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುವ ಸಮಯ ಇದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಕಾರ್ಯನಿರ್ವಹಿಸಬೇಕಾಗಿದೆ, ಈ ಭೀಕರ ಪರಿಸ್ಥಿತಿಯನ್ನು ತಗ್ಗಿಸಲು ಸರ್ಕಾರಗಳು ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ನಾವೆಲ್ಲರೂ ಬೆಂಬಲಿಸುತ್ತೇವೆ ಮತ್ತು ಸಹಕರಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
‘ವರ್ಷದಿಂದ ವರ್ಷಕ್ಕೆ ದೆಹಲಿ ನಗರದ ಜನರು ವಿಷ ಗಾಳಿಯನ್ನು ಸೇವಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರು, ಪ್ರತಿದಿನ ಶಾಲೆಗೆ ಹೋಗುವ ಮಕ್ಕಳು ಮತ್ತು ವಿಶೇಷವಾಗಿ ಹಿರಿಯ ನಾಗರಿಕರು, ನಾವೆಲ್ಲರೂ ಉಸಿರಾಡುತ್ತಿರುವ ಕೊಳಕು ಹೊಗೆಯನ್ನು ತೆರವುಗೊಳಿಸಲು ಅಗತ್ಯವಿದೆ’ ಎಂದಿರುವ ಪ್ರಿಯಾಂಕಾ, ತಕ್ಷಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ, ಸಚಿವ ಯಾದವ್ ಮತ್ತು ಸಿಎಂ ಗುಪ್ತಾ ಅವರನ್ನು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಭಾನುವಾರ ಗಾಳಿಯ ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಕುಸಿತ ಕಂಡಿದ್ದು, ಎಕ್ಯೂಐ ಸೂಚ್ಯಂಕ 386ಕ್ಕೆ ತಲುಪಿದೆ. 301 ರಿಂದ 400ವರೆಗಿನ ಎಕ್ಯೂಐ ಸೂಚ್ಯಂಕ ಗಾಳಿಯ ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ ಎನ್ನುವುದನ್ನು ಸೂಚಿಸುತ್ತದೆ.