ಸ್ಫೋಟ ನಡೆದ ಸ್ಥಳ
– ಪಿಟಿಐ ಚಿತ್ರ
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೂ ಮುನ್ನ ನಡೆದ ಘಟನೆಗಳನ್ನು ಅರಿಯುವ ಪ್ರಯತ್ನವನ್ನು ತನಿಖಾ ತಂಡ ಮಾಡುತ್ತಿದ್ದು, ಸಮೀಪದಲ್ಲಿ ಇದ್ದ ಪಾರ್ಕಿಂಗ್ ಪ್ರದೇಶಕ್ಕೆ ಬಂದ ಪ್ರತಿಯೊಂದು ವಾಹನದ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸ್ಫೋಟಗೊಂಡ ಕಾರನ್ನು ಅಲ್ಲಿ ಮೂರು ಗಂಟೆ ಪಾರ್ಕಿಂಗ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅಲ್ಲಿ ಪಾರ್ಕ್ ಮಾಡಲಾದ ಕಾರುಗಳ ನೋಂದಣಿ ಸಂಖ್ಯೆಯನ್ನು ಪಟ್ಟಿ ಮಾಡಿ, ಅವುಗಳ ಚಾಲಕರು ಅಥವಾ ಮಾಲೀಕರಿಂದ ಸ್ಫೋಟದಲ್ಲಿ ಭಾಗಿಯಾದ ಹರಿಯಾಣ ನೋಂದಣಿಯ ಐ20 ಕಾರನ್ನು ಗಮನಿಸಿರುವುದರ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ.
ಸ್ಫೋಟದ ಹಿಂದಿನ ಪಿತೂರಿಯನ್ನು ತನಿಖೆ ಮಾಡಲು ‘ಕ್ರಿಮಿನಲ್ ಪಿತೂರಿ‘ಯ ವಿಭಾಗಗಳ ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕವು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿನ ವಿಭಾಗಗಳ ಅಡಿಯಲ್ಲಿ ಹಿಂದೆ ದಾಖಲು ಮಾಡಲಾಗಿದ್ದ ಎಫ್‌ಐಆರ್ ಅನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ.
ಸ್ಫೋಟಕ್ಕೆ ಬಳಸಲಾದ ಕಾರು ಚಲಾಯಿಸುತ್ತಿದ್ದ ಡಾ. ಉಮರ್ ನಬಿ ಸೋಮವಾರ ಅದನ್ನು ಪಾರ್ಕಿಂಗ್ ಸ್ಥಳದಲ್ಲಿ ಇರಿಸಿದ್ದರು. ಆ ವೇಳೆ ಹಲವಾರು ವಾಹನಗಳು ಹತ್ತಿರದಲ್ಲಿಯೇ ಇದ್ದವು ಎಂದು ಮೂಲಗಳು ತಿಳಿಸಿವೆ.
‘ಆ ಸಮಯದಲ್ಲಿ ಅಲ್ಲಿದ್ದ ಪ್ರತಿಯೊಂದು ಕಾರನ್ನು ಪತ್ತೆಹಚ್ಚಲಾಗುತ್ತಿದೆ, ಅವರು HR-26 ನೋಂದಣಿಯ ಕಾರನ್ನು ನೋಡಿದ್ದಾರೆಯೇ, ಅದರೊಳಗೆ ಎಷ್ಟು ಜನರಿದ್ದಾರೆ ಎನ್ನುವುದನ್ನು ವಿಚಾರಿಸಿ ಉಮರ್ ಜೊತೆ ಬೇರೆ ಯಾರಾದರೂ ಇದ್ದಾರೆಯೇ ಎಂದು ನಿರ್ಧರಿಸಲಾಗುತ್ತಿದೆ‘ ಎಂದು ಮೂಲಗಳು ತಿಳಿಸಿವೆ.
ಕಾರಿನಲ್ಲಿ ಉಮರ್ ಒಬ್ಬನೇ ಇದ್ದಿದ್ದೇ? ಪಾರ್ಕಿಂಗ್ ಪ್ರದೇಶದೊಳಗೆ ಇದ್ದ ಮೂರು ಗಂಟೆಗಳಲ್ಲಿ ಬೇರೆ ಯಾರಾದರೂ ವಾಹನವನ್ನು ಪ್ರವೇಶಿಸಿದ್ದಾರೆಯೇ ಅಥವಾ ನಿರ್ಗಮಿಸಿದ್ದಾರೆಯೇ ಎಂದು ಪರಿಶೀಲಿಸಲು ತನಿಖಾಧಿಕಾರಿಗಳು ಚಾಲಕರಿಗೆ ಉಮರ್ ಅವರ ಛಾಯಾಚಿತ್ರವನ್ನು ತೋರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಮೂರು ಗಂಟೆಗಳಲ್ಲಿ ಏನಾಯಿತು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದು ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಕಾರಿನೊಳಗೆ ಸ್ಫೋಟಕ ಸಾಧನವನ್ನು ಇರಿಸಲಾಗಿದೆಯೇ ಎಂದು ಪರಿಶೀಲಿಸುವುದು ಇದರ ಉದ್ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.