ADVERTISEMENT

ದೆಹಲಿ ಸ್ಫೋಟದ ಹಿಂದೆ ಉಗ್ರರ ದಾಳಿ ಶಂಕೆ: ಇಸ್ರೇಲ್ ರಾಯಭಾರಿ

ಏಜೆನ್ಸೀಸ್
Published 30 ಜನವರಿ 2021, 9:35 IST
Last Updated 30 ಜನವರಿ 2021, 9:35 IST
ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಗರಿಷ್ಠ ಭದ್ರತೆ ಒದಗಿಸಲಾಗಿದೆ.
ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಗರಿಷ್ಠ ಭದ್ರತೆ ಒದಗಿಸಲಾಗಿದೆ.    

ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಸನಿಹದಲ್ಲಿ ಶುಕ್ರವಾರ ನಡೆದ ಸ್ಫೋಟವು ಭಯೋತ್ಪಾದಕ ದಾಳಿಯಾಗಿರಬಹುದು ಎಂದು ಭಾರತದ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಶಂಕೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಘಟನೆ ಕುರಿತು ತನಿಖೆ ನಡೆಸುತ್ತಿರುವ ಭಾರತದ ತನಿಖಾ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶನಿವಾರ ತಿಳಿಸಿದರು.

ತನಿಖೆ ಪ್ರಗತಿಯತ್ತಿದ್ದು, ಘಟನಾ ಸ್ಥಳದಿಂದ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಭಾರತ ಹಾಗೂ ಇಸ್ರೇಲ್ ಅಧಿಕಾರಿಗಳ ನಡುವೆ ಸಂಪೂರ್ಣ ಸಹಯೋಗವಿದೆ. ಈಗಿನ ಅಂದಾಜಿನ ಪ್ರಕಾರ ಇಸ್ರೇಲ್ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿರಬಹುದು ಎಂಬ ಬಲವಾದ ಶಂಕೆಯಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ರಾನ್ ಮಾಲ್ಕಾ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ADVERTISEMENT

ನಿನ್ನೆ (ಶುಕ್ರವಾರ) ಉಗ್ರರ ದಾಳಿ ನಡೆದಾಗ ಭಾರತ ಹಾಗೂ ಇಸ್ರೇಲ್ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ 29ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು. ಅದೇ ದಿನ ಸ್ಫೋಟ ನಡೆದಿದ್ದು, ಈ ಎಲ್ಲ ಅಂಶಗಳ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದವರು ಹೇಳಿದರು.

2012ನೇ ಇಸವಿಯಲ್ಲೂ ದೆಹಲಿಯಲ್ಲಿ ಇಸ್ರೇಲ್ ರಾಯಭಾರದ ವಿರುದ್ಧ ದಾಳಿ ನಡೆದಿತ್ತು. ಅದಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.

ಏತನ್ಮಧ್ಯೆ ವಿಶೇಷ ತನಿಖಾ ತಂಡವನ್ನು ಭಾರತಕ್ಕೆ ರವಾನಿಸಲು ಇಸ್ರೇಲ್ ನಿರ್ಧರಿಸಿದೆ. ಶುಕ್ರವಾರದಂದು ದೆಹಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಸನಿಹದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು.

ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಗರಿಷ್ಠ ಭದ್ರತೆ ಒದಗಿಸಲಾಗಿದೆ. ತನಿಖೆ ವೇಳೆಯಲ್ಲಿ ಇಬ್ಬರು ಅಜ್ಞಾತ ವ್ಯಕ್ತಿಗಳು ಕ್ಯಾಬ್‌ನಿಂದ ಇಳಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಸ್ರೇಲ್ ರಾಯಭಾರಿಗೆ ಸಂಬಂಧಿಸಿದ ಕವರ್ ಕೂಡಾ ಪೊಲೀಸರಿಗೆ ಲಭಿಸಿದ್ದು, ವಿಸೃತ ತನಿಖೆ ನಡೆಸಲಾಗುತ್ತಿದೆ.

ಈ ನಡುವೆ ಜೈಷ್-ಉಲ್-ಹಿಂದ್ ಉಗ್ರ ಸಂಘಟನೆಯು ದೆಹಲಿ ಸ್ಫೋಟದ ಹೊಣೆ ಹೊತ್ತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.