ADVERTISEMENT

ದೆಹಲಿ: ವೃದ್ಧೆಯನ್ನು ಆಸ್ಪತ್ರೆಗೆ ತಲುಪಿಸಿ ಹಣ ಪಡೆಯಲು ನಿರಾಕರಿಸಿದ ಕ್ಯಾಬ್ ಚಾಲಕ

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:16 IST
Last Updated 19 ಮೇ 2021, 19:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯಾರಿಗಾದರೂ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ ಕಿವಿಗೆ ಬಿದ್ದರೇ ಸಾಕು. ಆಪ್ತರು, ಸಂಬಂಧಿಗಳು, ನೆರೆಯವರೂ ಸೇರಿದಂತೆ ಯಾರೇ ಆಗಿರಲಿ, ಮೊದಲು ಮೂರು ಹೆಜ್ಜೆ ಹಿಂದಕ್ಕೆ ಸರಿದೇ ಮಾತಿಗಿಳಿಯುವ ಸ್ಥಿತಿ ಇದೆ.

ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕೊರೊನಾ ಪೀಡಿತರನ್ನು ಆಸ್ಪತ್ರೆಗೆ ಸೇರಿಸಬೇಕೆಂದರೆ ಒಬ್ಬರೂ ಕೈಗೆ ಸಿಗದ ಈ ದಿನಗಳಲ್ಲಿ, ವೃದ್ಧೆಯೊಬ್ಬ
ರನ್ನು ಆಸ್ಪತ್ರೆಗೆ ದಾಖಲಿಸಲು ಊಬರ್‌ ಕ್ಯಾಬ್‌ನ ಚಾಲಕರೊಬ್ಬರು ನೆರವು ನೀಡಿರುವ ಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ವರದಿಯಾಗಿದೆ.

12 ದಿನಗಳಿಂದ ಕೊರೊನಾದಿಂದ ಸಮಸ್ಯೆಗೆ ಒಳಗಾಗಿ ಪರಿತಪಿಸು
ತ್ತಿದ್ದ ತಮ್ಮ ತಾಯಿಯನ್ನು ನಗರದ ಹೊರ ವಲಯದಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆದೊಯ್ಯಲೆಂದೇ ಪತ್ರಕರ್ತೆ ರಿತುಪರ್ಣ ಚಟರ್ಜಿ ಅವರು ಆಂಬುಲೆನ್ಸ್‌ಗೆ ಕರೆ ಮಾಡಿ ಕಾದರೂ ಬಾರದಿದ್ದಾಗ, ಕ್ಯಾಬ್‌ ಬುಕ್‌ ಮಾಡಲು ನಿರ್ಧರಿಸಿದ್ದಾರೆ. ಆಸ್ಪತ್ರೆಗೆ ತೆರಳುವುದನ್ನು ಮೊದಲೇ ಫೋನ್‌ ಮೂಲಕ ಕೇಳಿ ತಿಳಿದ ನಾಲ್ವರು ಕ್ಯಾಬ್‌ ಚಾಲಕರು ಸವಾರಿ ರದ್ದುಪಡಿಸಿ ಮರಳಿದ್ದಾರೆ. ನಂತರ ಬುಕ್‌ ಮಾಡಲಾದ 5ನೇ ಕ್ಯಾಬ್‌ನ ಚಾಲಕ ತಕ್ಷಣವೇ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ ಎಂದು ಪತ್ರಕರ್ತೆ ಚಟರ್ಜಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ದೇಹಕ್ಕೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣ 80ಕ್ಕೆ ಕುಸಿದು, ತಾಯಿ ತೀವ್ರ ಗಂಭೀರ ಸ್ಥಿತಿಯಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಚಾಲಕ ಮೊದಲು ಆರೋಗ್ಯ ವಿಚಾರಿಸಿದ್ದು ಮಾತ್ರವಲ್ಲ, ಆಮ್ಲಜನಕದ ಸಿಲಿಂಡರ್ ವ್ಯವಸ್ಥೆ ಇರುವುದಾಗಿ ತಿಳಿಸಿ, ಆಮ್ಲಜನಕವನ್ನೂ ನೀಡಿ ಸಂಭವನೀಯ ಅಪಾಯದಿಂದ ಪಾರು ಮಾಡಿದ್ದಾರೆ.

ರೋಗಿಯನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆದೊಯ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳುವರೆಗೂ ಕಾದು, ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ ಚಾಲಕ, ‘ತೊಂದರೆ ಇದ್ದರೆ ಕರೆ ಮಾಡಿ’ ಎಂದು ಹೇಳಿ ಮರಳಿದ್ದರು.

ಮಾರನೇ ದಿನ ತಾಯಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ, ಅವರನ್ನು ಕೋವಿಡ್‌ ಕೇರ್‌ ಸೆಂಟರ್‌ನಿಂದ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ ಪತ್ರಕರ್ತೆ, ಹಿಂದಿನ ದಿನ ಬಂದಿದ್ದ ಕ್ಯಾಬ್‌ ಚಾಲಕನಿಗೆ ಕರೆ ಮಾಡಿದಾಗ, ಕೂಡಲೇ ಧಾವಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ನಂತರ ಪತ್ರಕರ್ತೆಯನ್ನು ಮನೆಗೂ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಇಷ್ಟೆಲ್ಲ ಸಹಾಯ ಮಾಡಿದರೂ ಕ್ಯಾಬ್‌ನ ಬಾಡಿಗೆ ಹಣವನ್ನೂ ಪಡೆಯಲು ನಿರಾಕರಿಸಿದ ಚಾಲಕ, ತನ್ನ ಮಾನವೀಯ ಸೇವೆಗೆ ಸಮಾಜದಿಂದ ಸಾಕಷ್ಟು ನೆರವು ಪಡೆದಿದ್ದಾಗಿ ಹೇಳಿದ್ದಾರೆ.

ತಾವು ಕಳೆದ ವರ್ಷವೇ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾಗಿಯೂ, ಎರಡೂ ಡೋಸ್‌ ಲಸಿಕೆ ಪಡೆದಿದ್ದರಿಂದ ಭಯದಿಂದ ಮುಕ್ತವಾಗಿದ್ದಾದಾಗಿ ತಿಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇವರ ಮಾನವೀಯ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.