ಸಾಂದರ್ಭಿಕ ಚಿತ್ರ
ನವದೆಹಲಿ: ಕೋಚಿಂಗ್ ಸೆಂಟರ್‌ನ ನೆಲಮಹಡಿಗೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣ ಸಂಬಂಧ, ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ದೆಹಲಿ ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅವರ ಕಚೇರಿಯು ತಿಳಿಸಿದೆ.
ವಿಭಾಗೀಯ ಅಧಿಕಾರಿ ವೇದ್ ಪಾಲ್ ಮತ್ತು ಸಹಾಯಕ ವಿಭಾಗೀಯ ಅಧಿಕಾರಿ ಉದಯ್ ವೀರ್ ಸಿಂಗ್ ಅವರು ನಿರ್ಲಕ್ಷ್ಯ ಮತ್ತು ವಾಸ್ತವವನ್ನು ಮುಚ್ಚಿಟ್ಟ ಆರೋಪ ಎದುರಿಸುತ್ತಿದ್ದರು ಎಂದು ಕಚೇರಿಯು ತಿಳಿಸಿದೆ.
ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅದು ಹೇಳಿದೆ.
ಅಮಾನತುಗೊಂಡ ಇಬ್ಬರು ಅಧಿಕಾರಿಗಳು ಅಗ್ನಿ ಸುರಕ್ಷತೆ ಪ್ರಮಾಣಪತ್ರ ನೀಡಲು ಕಟ್ಟಡವನ್ನು ಪರಿಶೀಲಿಸಿದ್ದರು. ಆದರೆ ನೆಲಮಹಡಿಯನ್ನು ಗ್ರಂಥಾಲಯವಾಗಿ ಪರಿವರ್ತಿಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ವಿಚಾರವನ್ನು ಮುಚ್ಚಿಟ್ಟಿದ್ದರು. ಜುಲೈ 9ರಂದು ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನು ವಿತರಿಸಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ಬಹಿರಂಗವಾಗಿದೆ.
ಅಮಾನತು ಆದೇಶದ ಬೆನ್ನಲ್ಲೇ ಮತ್ತಷ್ಟು ಶಿಸ್ತುಕ್ರಮ ಜರುಗಿಸಲು ‘ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ’ದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದೆ.
ಜುಲೈ 27ರಂದು ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್‌ನ ನೆಲಮಹಡಿಗೆ ನೀರು ನುಗ್ಗಿ ಮೂವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.