ADVERTISEMENT

ನಿರ್ಭಯಾ ಪ್ರಕರಣ: ಮರಣದಂಡನೆಗೆ ತಡೆ ನೀಡಲು ನಿರಾಕರಿಸಿದ ದೆಹಲಿ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:12 IST
Last Updated 2 ಮಾರ್ಚ್ 2020, 10:12 IST
ನಿರ್ಭಯಾ ಪ್ರಕರಣದ ಅಪರಾಧಿಗಳು
ನಿರ್ಭಯಾ ಪ್ರಕರಣದ ಅಪರಾಧಿಗಳು   

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ಶಿಕ್ಷೆಗೆ ತಡೆ ನೀಡಲು ದೆಹಲಿ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.

ಅಕ್ಷಯ್ ಕುಮಾರ್ (31), ಪವನ್ ಗುಪ್ತಾ (25), ಮುಖೇಶ್ ಸಿಂಗ್ (32) ಮತ್ತು ವಿನಯ್ ಶರ್ಮಾ (26) ಎಂಬ ಅಪರಾಧಿಗಳು ತಮ್ಮ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪಟಿಯಾಲ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದೆ.

ಪವನ್‌ ಕುಮಾರ್‌ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಅಲ್ಲದೆ, ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕೆಂಬ ಕೋರಿಕೆಯನ್ನೂ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಈ ಮೂಲಕ ಮರಣದಂಡನೆಯಿಂದ ಪಾರಾಗಲು ಅಪರಾಧಿಗಳ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳ ಸಾಧ್ಯತೆಯು ಕೊನೆಗೊಂಡಿದೆ. ಆದರೆ ಪವನ್ ಗುಪ್ತಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.

ADVERTISEMENT

ರಾಷ್ಟ್ರಪತಿಗಳ ಬಳಿಯಲ್ಲಿ ಕ್ಷಮಾದಾನ ಅರ್ಜಿಯ ತೀರ್ಪು ಬಾಕಿಯಿರುವಾಗ ನಾಳಿನ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾನೆ.

ಅವರು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಮತ್ತು ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ಇದೀಗ ಅವರೆಲ್ಲರೂ ನಾಳೆ ನೇಣುಗಂಬಕ್ಕೇರುತ್ತಿದ್ದಾರೆ ಎಂದು ನಿರ್ಭಯಾ ತಾಯಿ ತಿಳಿಸಿದ್ದಾರೆ.

ಕಾನೂನನ್ನು ತಿರುಚಲು ಮಾಡುತ್ತಿದ್ದ ಎಲ್ಲ ಪ್ರಯತ್ನಗಳಿಗೂ ಇಂದು ಕೊನೆಬಿದ್ದಿದೆ. ನನಗೆ ತುಂಬ ಸಂತೋಷವಾಗಿದೆ ಎಂದು ನಿರ್ಭಯಾ ಪರ ವಾದಿಸಿದ್ದ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.