ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಮೇಲಿರುವ ಪೊಕ್ಸೊ ಪ್ರಕರಣದ ಅಂತಿಮ ವರದಿಯನ್ನು ಸ್ವೀಕರಿಸಬೇಕೆ ಎಂಬುದರ ಕುರಿತು ದೆಹಲಿ ನ್ಯಾಯಾಲಯ ತನ್ನ ಆದೇಶವನ್ನು ಜ. 11ರಂದು ಪ್ರಕಟಿಸಲಿದೆ.
ಆ. 1ರಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶರು ತಮ್ಮ ಕೊಠಡಿಯಲ್ಲಿ ಸಂತ್ರಸ್ತ ಬಾಲಕಿಯಿಂದ ಹೇಳಿಕೆ ಪಡೆದಿದ್ದರು. ಪೊಲೀಸರು ನಡೆಸಿದ ತನಿಖೆ ತೃಪ್ತಿದಾಯಕ ಎಂದು ಹೇಳಿರುವ ಬಾಲಕಿ, ಪ್ರಕರಣ ಅಂತ್ಯಗೊಳಿಸಲು ಯಾವುದೇ ತಕರಾರು ವ್ಯಕ್ತಪಡಿಸಲಿಲ್ಲ ಎಂದು ಸರ್ಕಾರಿ ವಕೀಲ ಅತುಲ್ ಶ್ರೀವಾಸ್ತವ ಹೇಳಿದ್ದಾರೆ.
ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶರು ಆದೇಶ ಪ್ರತಿ ಇನ್ನೂ ಸಿದ್ಧವಾಗಿಲ್ಲ. ಹೀಗಾಗಿ ಜ. 11ರಂದು ಪ್ರಕಟಿಸಲಾಗುವುದು ಎಂದಿದ್ದಾರೆ ಎಂದೂ ತಿಳಿಸಿದ್ದಾರೆ.
ಜೂನ್ 15ರಂದು ವರದಿ ಸಲ್ಲಿಸಿದ್ದ ದೆಹಲಿ ಪೊಲೀಸರು, ಪ್ರಕರಣದಲ್ಲಿ ಬಾಲಕಿಯ ತಂದೆ ಸುಳ್ಳು ಆರೋಪ ಮಾಡಿದ್ದರು. ಪ್ರಕರಣದಲ್ಲಿ ದೃಢೀಕರಿಸಬಹುದಾದ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ ಪ್ರಕರಣವನ್ನು ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಜತೆಗೆ ಪೊಕ್ಸೊ ಪ್ರಕರಣವನ್ನು ಕೈಬಿಡಬಹುದು ಮತ್ತು ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಂದುವರಿಸಬಹುದು ಎಂದಿದ್ದರು.
ತಮ್ಮ ಮೇಲಿನ ಆರೋಪಗಳನ್ನು ಬ್ರಿಜ್‌ಭೂಷಣ್ ತಳ್ಳಿ ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.