ADVERTISEMENT

ದೆಹಲಿ: ಅಂಗಾಂಗ ದಾನಕ್ಕಾಗಿ ಮೃತ ಮಹಿಳೆಯ ದೇಹದಲ್ಲಿ ಮತ್ತೆ ರಕ್ತದ ಪರಿಚಲನೆ!

ಪಿಟಿಐ
Published 9 ನವೆಂಬರ್ 2025, 6:24 IST
Last Updated 9 ನವೆಂಬರ್ 2025, 6:24 IST
   

ನವದೆಹಲಿ: ಅಂಗಾಂಗಗಳ ದಾನಕ್ಕಾಗಿ ಮೃತಪಟ್ಟ 55 ವರ್ಷದ ಮಹಿಳೆಯ ದೇಹದಲ್ಲಿ ಮತ್ತೆ ವೈದ್ಯರು ರಕ್ತದ ಪರಿಚಲನೆ ಮಾಡಿದ್ದಾರೆ. ಇಂಥ ವೈದ್ಯಕೀಯ ಕ್ರಿಯೆ ಏಷ್ಯಾದಲ್ಲೇ ಇದೇ ಮೊದಲ ಬಾರಿಗೆ ನಡೆದಿದೆ. ದ್ವಾರಕಾದ ಎಚ್‌ಸಿಎಂಸಿಟಿ ಮಣಿಪಾಲ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಪಾರ್ಶ್ವವಾಯುವಿಗೆ ಒಳಗಾಗಿದ್ದ ಗೀತಾ ಚಾವ್ಲಾ ಎಂಬುವವರನ್ನು ನವೆಂಬರ್‌ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಅವರು ನವೆಂಬರ್ 6ರಂದು ರಾತ್ರಿ 8:43ಕ್ಕೆ ನಿಧನರಾಗಿದ್ದರು.

ಅಂಗಾಂಗಗಳನ್ನು ದಾನ ಮಾಡಬೇಕೆಂಬ ಆಕೆಯ ಇಚ್ಛೆಯಂತೆ, ವೈದ್ಯರ ತಂಡವು ನಾರ್ಮಥರ್ಮಿಕ್ ರೀಜನಲ್ ಪರ್ಫ್ಯೂಷನ್ (NRP) ಎಂಬ ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಅವರು ಮೃತಪಟ್ಟ ಐದು ನಿಮಿಷಗಳ ಬಳಿಕ ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಟರ್ (ECMO) ಬಳಸಿ, ವೈದ್ಯರು ಆಕೆಯ ಕಿಬ್ಬೊಟ್ಟೆಯ ಅಂಗಗಳಲ್ಲಿ ರಕ್ತದ ಪರಿಚಲನೆ ಯಶಸ್ವಿಯಾಗಿ ಮಾಡಿದ್ದಾರೆ.

ADVERTISEMENT

ದಾನಕ್ಕಾಗಿ ಅಂಗಗಳನ್ನು ರಕ್ಷಿಸಲು ಮರಣಾನಂತರ ರಕ್ತದ ಪರಿಚಲನೆ ಮಾಡಲಾಗಿದ್ದು, ಏಷ್ಯಾದಲ್ಲಿ ಇದೇ ಮೊದಲು ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಅಧ್ಯಕ್ಷ ಡಾ. ಶ್ರೀಕಾಂತ್ ಶ್ರೀನಿವಾಸನ್ ಹೇಳಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಮೆದುಳು ನಿಷ್ಕ್ರಿಯವಾದ ಬಳಿಕ ಅಂಗಾಂಗ ದಾನ ಮಾಡಲಾಗುತ್ತದೆ. ಆದರೆ ರಕ್ತಪರಿಚಲನೆ ನಿಷ್ಕ್ರಿಯವಾದ ಬಳಿಕ ಹೃದಯ ಬಡಿತ ನಿಂತುಹೋಗುತ್ತದೆ. ಆದ್ದರಿಂದ ಸಮಯವು ನಿರ್ಣಾಯಕವಾಗಿದೆ. ಎನ್‌ಆರ್‌ಪಿ ಬಳಸುವ ಮೂಲಕ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಚಾವ್ಲಾ ಅವರ ಯಕೃತ್ತನ್ನು ಇನ್ಸ್ಟಿಟ್ಯೂಟ್ ಆಫ್ ಲಿವರ್ & ಬಿಲಿಯರಿ ಸೈನ್ಸ್ (ಐಎಲ್‌ಬಿಎಸ್) ನಲ್ಲಿ 48 ವರ್ಷದ ವ್ಯಕ್ತಿಗೆ ಹಾಗೂ ಅವರ ಮೂತ್ರಪಿಂಡಗಳನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ 63 ಮತ್ತು 58 ವರ್ಷ ವಯಸ್ಸಿನ ಇತರ ಇಬ್ಬರು ಪುರುಷರಿಗೆ ಕಸಿ ಮಾಡಲಾಗಿದೆ.

ಅಲ್ಲದೇ ಕಾರ್ನಿಯಾ ಮತ್ತು ಚರ್ಮವನ್ನು ಸಹ ದಾನ ಮಾಡಲಾಗಿದ್ದು , ಇದು ಅನೇಕ ರೋಗಿಗಳಿಗೆ ಉಪಯುಕ್ತವಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.