ನವದೆಹಲಿ: ದೆಹಲಿಯಲ್ಲಿ ಒಂದು ಕಡೆ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇನ್ನೊಂದು ಕಡೆ ಕೋವಿಡ್ 19 ಸೋಂಕಿನ ಪ್ರಸರಣವೂ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿಯಲ್ಲಿ ನಾಗರಿಕರು ಪಟಾಕಿ ಹಚ್ಚಬಾರದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಕರೆ ನೀಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ನಮ್ಮ ಸರ್ಕಾರ ದೆಹಲಿಯಾದ್ಯಂತ ವಿಶೇಷವಾಗಿ ‘ಲಕ್ಷ್ಮಿ ಪೂಜೆ‘ಯನ್ನು ಆಯೋಜಿಸುತ್ತಿದೆ. ನವೆಂಬರ್ 14ರಂದು ಸಂಪುಟದ ಸಚಿವರ ಉಪಸ್ಥಿತಿಯಲ್ಲಿ ನಡೆಯುವ ವಿಶೇಷ ಪೂಜೆ ಟಿವಿ ಸೇರಿದಂತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ. ಸಾರ್ವಜನಿಕರು ಮನೆಯಲ್ಲೇ ಕುಳಿತು ಟಿವಿ ಅಥವಾ ಆನ್‌ಲೈನ್ ಮೂಲಕ ಪೂಜೆಯಲ್ಲಿ ಭಾಗವಹಿಸಬೇಕು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
’ಸದ್ಯ ದೆಹಲಿ, ಕೋವಿಡ್ –19 ಸಾಂಕ್ರಾಮಿಕ ರೋಗ ಭೀತಿ ಹಾಗೂ ವಾಯುಮಾಲಿನ್ಯ ಹೆಚ್ಚಳದಂತಹ ಎರಡು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಎಪಿ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ದೀಪಾವಳಿಗೆ ಜನರು ಪಟಾಕಿಯಿಂದ ದೂರವಿರಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.