ನವದೆಹಲಿ: ‘ದೆಹಲಿ ಸರ್ಕಾರವನ್ನು ಜೈಲಿನಿಂದ ಮನ್ನಡೆಸಲು ಸಾಧ್ಯ ಇಲ್ಲ’ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಬುಧವಾರ ಹೇಳಿದ್ದಾರೆ.
‘ಜೈಲಿನಲ್ಲಿದ್ದರೂ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವರು’ ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಟೈಮ್ಸ್ ನೌ ಸುದ್ದಿವಾಹಿನಿ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡಿರುವ ಸಕ್ಸೇನಾ,‘ಜೈಲಿನಿಂದ ಸರ್ಕಾರ ಮುನ್ನಡೆಸಲು ಅವಕಾಶ ನೀಡುವುದಿಲ್ಲ ಎಂಬುದಾಗಿ ದೆಹಲಿ ನಿವಾಸಿಗಳಿಗೆ ನಾನು ಭರವಸೆ ನೀಡುತ್ತೇನೆ’ ಎಂದು ಹೇಳಿದ್ದಾರೆ.
‘ಜೀವನದಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ (ಲೋಹೆ ಕೆ ಚನೆ ಚಬಾನಾ) ಎಂಬ ಗಾದೆಮಾತನ್ನು ನಾವೆಲ್ಲಾ ಚಿಕ್ಕವರಿದ್ದಾಗ ಕೇಳಿದ್ದೇವೆ. ದೆಹಲಿಗೆ ಬಂದ ನಂತರ ಈ ಗಾದೆಮಾತಿನ ಅರ್ಥ ನನಗೆ ಮನವರಿಕೆಯಾಯಿತು’ ಎಂದು ಹೇಳಿದ್ದಾರೆ.
‘ದೆಹಲಿಯಲ್ಲಿ ಯಾವುದೇ ಕೆಲಸ ಕಾರ್ಯಗತಗೊಳಿಸಬೇಕು ಎಂದಾಗ ಈ ಗಾದೆಮಾತು ಅನುಭವಕ್ಕೆ ಬರುತ್ತದೆ. ಕೆಲ ಶಕ್ತಿಗಳು ಅಡ್ಡಿಯನ್ನುಂಟು ಮಾಡುತ್ತವೆ. ಒಂದು ವೇಳೆ ನೀವು ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿದಲ್ಲಿ, ಅದರ ಶ್ರೇಯವನ್ನು ತಮ್ಮ ಮುಡಿಗೇರಿಸಿಕೊಳ್ಳಲು ಈ ಶಕ್ತಿಗಳು ಯತ್ನಿಸುತ್ತವೆ’ ಎಂದು ಪರೋಕ್ಷವಾಗಿ ಎಎಪಿ ನೇತೃತ್ವದ ಆಡಳಿತಕ್ಕೆ ಚಾಟಿ ಬೀಸಿದ್ದಾರೆ.
ಅರವಿಂದ ಕೇಜ್ರಿವಾಲ್ ಬಂಧನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಿದಲ್ಲಿ ಅದು ರಾಜಕೀಯ ಸೇಡು ಎಂಬುದು ಸ್ಪಷ್ಟವಾಗಲಿದೆ.ಆತಿಶಿ ಮರ್ಲೆನಾ, ದೆಹಲಿ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.