ಸಾಂದರ್ಭಿಕ ಚಿತ್ರ
ನವದೆಹಲಿ: ಹೋಟೆಲ್‌ಗಳ ಬಿಲ್ಲುಗಳಲ್ಲಿ ಸಹಜ ಎಂಬಂತೆ ವಿಧಿಸಲಾಗುತ್ತಿರುವ ಸೇವಾ ಶುಲ್ಕ ರದ್ದುಪಡಿಸುವಂತೆ ಕೋರಿ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರವು (CCPA) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ನ್ಯಾ. ಪ್ರತಿಭಾ ಎಂ. ಸಿಂಗ್ ಅರ್ಜಿಯ ವಿಚಾರಣೆ ನಡೆಸಿದರು.
ಸೇವಾ ಶುಲ್ಕ ಪಡೆಯದಂತೆ 2022ರ ಜುಲೈ 4ರಂದು ಸಿಸಿಪಿಎ ಹೊರಡಿಸಿದ್ದ ಮಾರ್ಗಸೂಚಿ ವಿರುದ್ಧ ಅಖಿಲ ಭಾರತ ಹೋಟೆಲ್ ಹಾಗೂ ರೆಸ್ಟೋರೆಂಟ್ ಸಂಘದ ಒಕ್ಕೂಟ (FHRAI) ಹಾಗೂ ಅಖಿಲ ಭಾರತ ರಾಷ್ಟ್ರೀಯ ರೆಸ್ಟೂರೆಂಟ್ ಸಂಘ (NRAI) 2022ರಲ್ಲಿ ಎರಡು ಪ್ರತ್ಯೇಕ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ನಂತರ ಇದಕ್ಕೆ ಹೈಕೋರ್ಟ್ ತಡೆ ನೀಡಿತ್ತು.
‘ಸ್ವಾಭಾವಿಕ ನ್ಯಾಯದ ತತ್ವವನ್ನು ಪಾಲಿಸದೇ ಇಂಥ ಮಾರ್ಗಸೂಚಿಗಳನ್ನು ಜಾರಿಗೆ ತರುವ ಅಧಿಕಾರ ಸಿಸಿಪಿಎಗೆ ಇಲ್ಲ. ಉದ್ಯಮದವರೊಂದಿಗೆ ಚರ್ಚಿಸದಿರುವುದೂ ಸ್ವಾಭಾವಿಕ ನ್ಯಾಯದ ವಿರುದ್ಧವಾದದ್ದು. ಹೀಗಾಗಿ ಯಾವುದೇ ಮಾರ್ಗಸೂಚಿಯು ಸಹಜ ನ್ಯಾಯವನ್ನು ಪುಷ್ಟೀಕರಿಸುವಂತಿರಬೇಕು’ ಎಂದು ಶುಕ್ರವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಹೋಟೆಲುಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವ ಸಲುವಾಗಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಆದರೆ ಹೀಗೆ ಪಡೆಯಲಾಗುತ್ತಿರುವ ಸೇವಾ ಶುಲ್ಕವನ್ನು ಕಾರ್ಮಿಕರ ಕಲ್ಯಾಣಕ್ಕೆ ಹೇಗೆ ಬಳಕೆ ಮಾಡಬೇಕು ಎಂಬುದನ್ನು ಕೇಂದ್ರದ ಸ್ಥಾಮಿ ಸಮಿತಿಯು ವಿವರಿಸಿಲ್ಲ. ಕಳೆದ ಹಲವು ವರ್ಷಗಳಿಂದ ಸೇವಾ ಶುಲ್ಕವನ್ನು ಸಾಂಪ್ರದಾಯಿಕ ಶುಲ್ಕದಂತೆ ಪಡೆಯಲಾಗುತ್ತಿದೆ. ಈ ಕುರಿತು ಹೋಟೆಲುಗಳ ಆವರಣದಲ್ಲಿ ಮತ್ತು ಮೆನು ಕಾರ್ಡ್‌ಗಳಲ್ಲಿ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಅನಿಯಂತ್ರಿತವಾದ ಹಾಗೂ ಸಮರ್ಥನೀಯವಲ್ಲದ ಸಿಸಿಪಿಎ ಮಾರ್ಗಸೂಚಿಯನ್ನು ರದ್ದುಗೊಳಿಸಬೇಕು ಎಂದು ಸಂಘಗಳು ಮನವಿ ಮಾಡಿದವು.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಸಿಸಿಪಿಎ, ‘ಗ್ರಾಹಕರ ಹಿತ ಕಾಯುವಲ್ಲಿ ಅರ್ಜಿದಾರರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರ ದುಡಿದ ಹಣವನ್ನು ಸ್ವಾಭಾವಿಕ ಎಂಬಂತೆ ಪಡೆಯಲಾಗುತ್ತಿದೆ. ತಿನಿಸು ಮತ್ತು ಅದಕ್ಕೆ ವಿಧಿಸುವ ತೆರಿಗೆ ಮೀರಿ ಸೇವಾ ಶುಲ್ಕವನ್ನು ಗ್ರಾಹಕರಿಂದ ಕಡ್ಡಾಯ ಎಂಬಂತೆ ಪಡೆಯುತ್ತಿರುವುದು ಕಾನೂನು ವಿರೋಧಿಯಾಗಿದೆ. ಏಕೆಂದರೆ ಹೀಗೆ ಪಡೆಯುವ ಸೇವಾ ಶುಲ್ಕಕ್ಕೆ ಯಾವುದೇ ಹೆಚ್ಚುವರಿ ಅಥವಾ ವಿಶೇಷ ಸೇವೆಯನ್ನು ನೀಡಲಾಗುತ್ತಿಲ್ಲ’ ಎಂದು ಪೀಠದ ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.