ADVERTISEMENT

ಬಾಡಿಗೆ ತಾಯ್ತನ: ವಯೋಮಿತಿ ಪ್ರಶ್ನಿಸಿ ಅರ್ಜಿ; ಕೇಂದ್ರದ ನಿಲುವಿಗೆ HC ಸೂಚನೆ

ಪಿಟಿಐ
Published 14 ಫೆಬ್ರುವರಿ 2024, 13:36 IST
Last Updated 14 ಫೆಬ್ರುವರಿ 2024, 13:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಬಾಡಿಗೆ ತಾಯ್ತನಕ್ಕೆ ಮಹಿಳೆಯು 23ರಿಂದ 50ರ ವಯೋಮಿತಿಯವರಾಗಿರಬೇಕು ಎಂಬ ಕಾನೂನು ಪ್ರಶ್ನಿಸಿ ದಂಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ‘ಸರ್ಕಾರದ ಈ ನಿಯಮ ಸಂತಾನ ಪಡೆಯಬೇಕೆಂದಿರುವ ನಮ್ಮಂತವರಿಗೆ ಆಗಿರುವ ಅನ್ಯಾಯ’ ಎಂದು 51 ವರ್ಷದ ದಂಪತಿ ಅರ್ಜಿಯಲ್ಲಿ ಹೇಳಿದ್ದರು.

ADVERTISEMENT

‘ವಿಜ್ಞಾನಕ್ಕೆ ಕೆಲವೊಂದು ನಿಲುವುಗಳಿವೆ. ವಿಜ್ಞಾನದೊಂದಿಗೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಹಾಗೆಯೇ ಮತ್ತೊಬ್ಬರ ಬದುಕಿನೊಂದಿಗೆ ಆಟವಾಡಲೂಬಾರದು. ಕೆಲವೊಮ್ಮೆ ಮಗು ವಿರೂಪ ಹೊಂದುವ ಅಪಾಯವೂ ಇದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಮಗು ಪಡೆಯಬೇಕೆಂಬ ಉದ್ದೇಶಿತ ಮಹಿಳೆಯು ನಿರ್ದಿಷ್ಟ ವಯೋಮಾನ ದಾಟಿರುವುದರಿಂದ ವೈದ್ಯಕೀಯ ಪ್ರಮಾಣ ಪತ್ರ ನೀಡಲೂ ಬಾರದು’ ಎಂದು ವೈದ್ಯಕೀಯ ಮಂಡಳಿಯು ದಂಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

‘ಮದುವೆಯಾಗಿ 19 ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ಕೃತಕ ಗರ್ಭಧಾರಣೆಗೆ 2 ಬಾರಿ ಪ್ರಯತ್ನಿಸಿದರೂ ಅದೂ ಫಲ ನೀಡಲಿಲ್ಲ. ಹೀಗಾಗಿ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ನಿರ್ಧರಿಸಿದೆವು. ಆದರೆ ವೈದ್ಯಕೀಯ ಮಂಡಳಿ ತಮ್ಮ ಅರ್ಜಿಯನ್ನು ತಿರಸ್ಕರಿಸಿದೆ. ಇಲ್ಲಿ ವಾಸ್ತವವನ್ನು ಪರಿಗಣಿಸದೇ ಕೇವಲ ಯಾಂತ್ರಿಕವಾಗಿ ಅರ್ಜಿಯನ್ನು ನೋಡಲಾಗಿದೆ’ ಎಂದು ಅರ್ಜಿಯಲ್ಲಿ ದಂಪತಿ ಆರೋಪಿಸಿದ್ದರು.

‘ವೈದ್ಯಕೀಯ ಮಂಡಳಿ ಎದುರು ನಮ್ಮ ವಾದ ಮಂಡಿಸಲು ಅವಕಾಶವನ್ನೇ ನೀಡದೆ, ನೈಸರ್ಗಿಕವಾಗಿ ನ್ಯಾಯ ಪಡೆಯುವುದನ್ನು ತಡೆಯಲಾಗಿದೆ. ‌‌‌‌ಯಾವುದೇ ಸಕಾರಣವಿಲ್ಲದೆ ಅರ್ಜಿದಾರರ ಹಕ್ಕುಗಳನ್ನು ಕಸಿದುಕೊಂಡು ಮೂಲಭೂತ ಹಕ್ಕುಗಳಿಂದ ವಂಚಿತರಾಗುವಂತೆ ಮಾಡಲಾಗಿದೆ’ ಎಂದು ಈ ದಂಪತಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

ಅರ್ಜಿದಾರರ ಕೋರಿಕೆ ಕುರಿತು ಪ್ರಾಧಿಕಾರವು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಕರಣದ ವಿಚಾರಣೆಯನ್ನು ಮೇ ನಲ್ಲಿ ನಡೆಸುವುದಾಗಿ ನ್ಯಾಯಾಲಯ ಹೇಳಿತು. 

ಪೀಠದಲ್ಲಿ ನ್ಯಾ. ಮನಮೀತ್ ಪಿ.ಎಸ್. ಅರೋರಾ ಅವರೂ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.