ADVERTISEMENT

ಕಪ್ಪುಪಟ್ಟಿಯಲ್ಲಿ ಅಮೆರಿಕ ಪತ್ರಕರ್ತ: ಕೇಂದ್ರದ ನಿಲುವು ಕೇಳಿದ ದೆಹಲಿ ಹೈಕೋರ್ಟ್‌

ಪಿಟಿಐ
Published 1 ಮಾರ್ಚ್ 2023, 5:57 IST
Last Updated 1 ಮಾರ್ಚ್ 2023, 5:57 IST
   

ನವದೆಹಲಿ: ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಗುರುತಿನ ಚೀಟಿ ಹೊಂದಿರುವುದರ ಹೊರತಾಗಿಯೂ ಅಮೆರಿಕದ ಪತ್ರಕರ್ತರೊಬ್ಬರನ್ನು ಭಾರತವು ಕಪ್ಪುಪಟ್ಟಿಗೆ ಸೇರಿಸಿದೆ ಎನ್ನಲಾದ ಆರೋಪದ ಕುರಿತು ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಭಾರತ ಪ್ರವೇಶವನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಮೆರಿಕದ ವೈಸ್‌ ನ್ಯೂಸ್‌ ಸಂಸ್ಥೆಯ ಪತ್ರಕರ್ತ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗೆ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ನೀಡಿತ್ತು. ಪತ್ರಕರ್ತನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಆಗ ತಿಳಿದುಬಂತು ಎಂದು ಪತ್ರಕರ್ತನ ಪರ ವಕೀಲ ಅಂಗಾದ್‌ ಸಿಂಗ್‌ ಕೋರ್ಟ್‌ಗೆ ಹೇಳಿದ್ದಾರೆ.

ಪತ್ರಕರ್ತನಿಗೆ ಭಾರತ ಪ್ರವೇಶವನ್ನು ರದ್ದುಗೊಳಿಸಿರುವುದು ಅಕ್ರಮ ಮತ್ತು ಸಂವಿಧಾನದ ವಿಧಿ 14, 21 ಮತ್ತು 25ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ಅರ್ಜಿಯಲ್ಲಿ ನಮೂದಿಸಿದ್ದಾರೆ.

ADVERTISEMENT

ಪತ್ರಕರ್ತರು ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರವು ಆಗಲೇ ಪ್ರತಿಕ್ರಿಯೆ ನೀಡಿತ್ತು. ‘ಪತ್ರಕರ್ತರ ವೀಸಾ’ ಪಡೆಯಲು ಅರ್ಜಿದಾರರು ಸಲ್ಲಿಸಿದ್ದ ವೀಸಾ ಅರ್ಜಿಯಲ್ಲಿ ವಾಸ್ತವಾಂಶಗಳನ್ನು ಮರೆಮಾಚಲಾಗಿತ್ತು ಮತ್ತು ಕೆಲ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ಹೇಳಿತ್ತು.

ಕಳೆದ ತಿಂಗಳು ಪತ್ರಕರ್ತನ ಅರ್ಜಿಗೆ ಪ್ರತಿಕ್ರಿಯಿಸಿದ್ದ ಕೇಂದ್ರ, ‘ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ ನಗರದಿಂದ ದೆಹಲಿಗೆ ನಿಯೋಜನೆಗೊಂಡಿದ್ದ ಪತ್ರಕರ್ತ ‘ಇಂಡಿಯಾ ಬರ್ನಿಂಗ್’ ಎಂಬ ಸಾಕ್ಷ್ಯಚಿತ್ರದಲ್ಲಿ ಭಾರತವನ್ನು ಋಣಾತ್ಮಕವಾಗಿ ಚಿತ್ರಿಸಿದ್ದ’ ಎಂದು ಹೇಳಿಕೆ ಸಲ್ಲಿಸಿತ್ತು.

ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಹೈಕೋರ್ಟ್‌ ಮಾರ್ಚ್‌ 17ಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.