ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿರುವುದು
– ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಮನೆಯೊಂದು ಕುಸಿದು ಬಿದ್ದು 4 ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳು ಮುಳುಗಡೆಯಾಗಿವೆ. ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
ಗುಡುಗು, ಬಿರುಗಾಳಿ ಸಹಿತ ಮಳೆಯಿಂದಾಗಿ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮೂರು ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ದೆಹಲಿ ವಿಮಾಣ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿದೆ.
ರೆಡ್ ಅಲರ್ಟ್ ನೀಡಿದ್ದ ನಜಾಫಗಢದ ಖಾರ್‌ಕಾರಿ ಎಂಬಲ್ಲಿ ಮನೆ ಕುಸಿದು ಮೂರು ಮಕ್ಕಳು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಮನೆ ಕುಸಿದಿರುವ ಬಗ್ಗೆ ಬೆಳಿಗ್ಗೆ 5.25ಕ್ಕೆ ಮಾಹಿತಿ ಬಂದಿದೆ. ಕೂಡಲೇ ಹಲವು ತಂಡ ಅಲ್ಲಿಗೆ ತೆರಳಿ ನಾಲ್ವರನ್ನು ಅವಶೇಷಗಳಡಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಮೃತಪಟ್ಟಿದ್ದಾಗಿ ಘೋಷಿಸಲಾಗಿದೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ದೆಹಲಿ ಅಗ್ನಿ ಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿಯೇ ಸಿಲುಕಿ ಪರದಾಡಿದ್ದಾರೆ. ಮರಗಳು ನೆಲಕ್ಕುರುಳಿವೆ. ಮಿಂಟೊ ರಸ್ತೆಯಲ್ಲಿ ಕಾರೊಂದು ಮುಳುಗಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಹವಾಮಾನ ಇಲಾಖೆಯ ಪ್ರಕಾರ ಸಫ್ದರ್‌ಜಂಗ್‌ನಲ್ಲಿ 77 ಮಿ.ಮೀ, ಲೋಧಿ ರಸ್ತೆಯಲ್ಲಿ 78 ಮಿ. ಮೀ, ಪಾಲಂನಲ್ಲಿ 30 ಮಿ.ಮೀ, ನಜಾಫಗಢದಲ್ಲಿ 19.5 ಮಿ.ಮೀ ಹಾಗೂ ಪಿತಾಂಪುರದಲ್ಲಿ 32 ಮಿ.ಮೀ ಮಳೆಯಾಗಿದೆ.
ಹವಾಮಾನ ವೈಪರೀತ್ಯದಿಂದ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಬಗ್ಗೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. ಭಾರಿ ಮಳೆ ಹಾಗೂ ಗುಡುಗಿನಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ದೆಹಲಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಬೇಕಿದ್ದ ಮೂರು ವಿಮಾನಗಳ ಪೈಕಿ ಎರಡನ್ನು ಜೈಪುರಕ್ಕೆ ಹಾಗೂ ಒಂದನ್ನು ಅಹಮದಾಬಾದ್‌ಗೆ ತಿರುಗಿಸಲಾಗಿದೆ. 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಭಾರೀ ಜಾಗರೂಕರಾಗಿರುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕರಿಗೆ ಸೂಚನೆ ನೀಡಿದೆ.
ದೆಹಲಿ–ರಾಷ್ಟ್ರರಾಜಧಾನಿ ಪ್ರದೇಶಲ್ಲಿ ಗುಡುಗು ಸಹಿತ ಭಾರಿ ಮಳೆ, 70–80 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮರಗಳು ಧರೆಗುರುಳಬಹುದು ವಿದ್ಯುತ್ ಪೂರೈಕೆ ತಂತಿಗಳಿಗೆ ಹಾನಿಯಾಗಬಹುದು, ಕಟಾವಿಗೆ ಬಂದಿರುವ ಬೆಳೆ ಹಾನಿಯಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.