
ದೆಹಲಿ ಹೈಕೋರ್ಟ್
ನವದೆಹಲಿ: ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಮಹಿಳೆಯೊಬ್ಬರ ಮೇಲೆ ಒತ್ತಡ ಹೇರುವುದು ಆಕೆಯ ದೇಹದ ಮೇಲಿನ ಹಕ್ಕನ್ನು ಉಲ್ಲಂಘಿಸಿದಂತೆ ಮತ್ತು ಮಾನಸಿಕ ಆಘಾತವನ್ನು ಹೆಚ್ಚಿಸಿದಂತೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
14 ವಾರದ ಭ್ರೂಣವನ್ನು ವೈದ್ಯಕೀಯವಾಗಿ ತೆಗೆಸಿದ್ದ ಪರಿತ್ಯಕ್ತ ಪತ್ನಿ ವಿರುದ್ಧ ಪತಿಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ (ಅಪರಾಧಿಕ) ಅರ್ಜಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
‘ವೈವಾಹಿಕ ತಕರಾರು ಪ್ರಕರಣದಲ್ಲಿ ಗರ್ಭಪಾತ ಬಯಸುವುದು ಆಕೆಯ ಸ್ವಾತಂತ್ರ್ಯವಾಗಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು, ‘ಅರ್ಜಿದಾರರ ಪತ್ನಿ, ಗರ್ಭಪಾತಕ್ಕೆ ಸಂಬಂಧಿಸಿದ ಐಪಿಸಿಯ 312ನೇ ಸೆಕ್ಷನ್ ಅನ್ನು ಉಲ್ಲಂಘಿಸುವ ಉದ್ದೇಶ ಹೊಂದಿಲ್ಲ’ ಎಂದು ಹೇಳಿದ್ದಾರೆ.
‘ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯವಾಗಿದ್ದು, ಗರ್ಭಾವಸ್ಥೆಯ ನಿಯಂತ್ರಣ ಮಹಿಳೆಯ ಅಗತ್ಯ ಮತ್ತು ಹಕ್ಕನ್ನು ಅವಲಂಬಿಸಿದೆ. ಗರ್ಭಪಾತ ನಿರ್ಣಯ ಕಾಯ್ದೆಯಲ್ಲಿ (ಎಂಟಿಪಿ) ಗರ್ಭಪಾತಕ್ಕೆ ಪತಿಯ ಅನುಮತಿ ಕೇಳಬೇಕೆಂದಿಲ್ಲ. ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗುವ ಹಾನಿಯನ್ನೂ ಶಾಸನದ ಜಾರಿ ವೇಳೆ ಪರಿಗಣಿಸಬೇಕಾಗುತ್ತದೆ’ ಎಂದು ಮಂಗಳವಾರ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ.
ಐಪಿಸಿ 312ನೇ ಸೆಕ್ಷನ್ ಅಡಿ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಪತಿ ನೀಡಿದ್ದ ಸಮನ್ಸ್ ಅನ್ನು ಪತ್ನಿ ಸೆಷನ್ಸ್ ನ್ಯಾಯಾಲಯದಲ್ಲಿ ಪಶ್ನಿಸಿದ್ದರು. ಸೆಷನ್ಸ್ ಕೋರ್ಟ್ ಆಕೆಗೆ ವಿನಾಯಿತಿ ನೀಡಿತ್ತು. ಇದನ್ನು ಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
‘ಗರ್ಭಪಾತದ ದಿನಾಂಕದವರೆಗೂ ನಾವು ಜೊತೆಗಿದ್ದೆವು. ವೈವಾಹಿಕ ವ್ಯಾಜ್ಯ ಇರಲಿಲ್ಲ. ಹೀಗಾಗಿ ಗರ್ಭಾವಸ್ಥೆ ನಿರ್ಣಯ ಕಾಯ್ದೆಯ ನಿಯಮ ಇಲ್ಲಿ ಅನ್ವಯಿಸುವುದಿಲ್ಲ’ ಎಂದು ಪತಿ ವಾದಿಸಿದ್ದರು.
ಆದರೆ ಕೋರ್ಟ್ ಇದನ್ನು ಅಲ್ಲಗಳೆದು, ವೈವಾಹಿಕ ವ್ಯಾಜ್ಯ ಎಂಬುದು ‘ದಂಪತಿ ಪ್ರತ್ಯೇಕವಾದಾಗ ಮತ್ತು ವಿವಾದ ಆದಾಗ ಉಂಟಾಗುತ್ತದೆ ಎಂದರ್ಥವಲ್ಲ. ತುರ್ತು ಮತ್ತು ಇಚ್ಛೆಯಿಲ್ಲದ ಗರ್ಭಾವಸ್ಥೆಯಲ್ಲಿ ಪುರುಷನು ಹೊರೆಯನ್ನು ಹಂಚಿಕೊಳ್ಳಲು ಅಲ್ಲಿ ಇರದಿರಬಹುದು. ಹೀಗಾಗಿ ಮಹಿಳೆ ‘ತನ್ನನ್ನು ತಾನೇ ರಕ್ಷಿಸಿಕೊಳ್ಳುವ’ ಅವಕಾಶ ಹೊಂದಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.
ವೈವಾಹಿಕ ಸ್ಥಿತಿಯಲ್ಲಿ ಬದಲಾವಣೆ ಆದಾಗ (ವಿಧವೆ, ವಿಚ್ಛೇದನ ಮತ್ತಿತರೆ) ಎಂಟಿಪಿ ಕಾಯ್ದೆಯ 3–ಬಿ(ಸಿ) ನಿಯಮದಡಿ ಆಕೆಗೆ ಗರ್ಭಪಾತ ನಿರ್ಣಯದ ಅಧಿಕಾರವಿದೆ ಎಂದು ಕೋರ್ಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.