ನವದೆಹಲಿ: ಮ್ಯೂಕರ್‌ಮೈಕೊಸಿಸ್ (ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್) ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುವ 'ಆ್ಯಂಫೊಟೆರಿಸಿನ್–ಬಿ' ಔಷಧವನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಈ ವಿಚಾರವಾಗಿ ಕೇಂದ್ರ ಸರ್ಕಾರವು ತೀರ್ಮಾನ ತೆಗೆದುಕೊಳ್ಳುವವರೆಗೆ ಆಮದುದಾರರು ಸುಂಕ ರಹಿತವಾಗಿ ಆ್ಯಂಫೊಟೆರಿಸಿನ್–ಬಿ ಔಷಧವನ್ನು ಆಮದು ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
ಕಪ್ಪು ಶಿಲೀಂಧ್ರ ಸೋಂಕಿನಿಂದ ಬಳಲುತ್ತಿರುವ ಸಾವಿರಾರು ಜನರ ಪ್ರಾಣ ಉಳಿಸಲು ಆ್ಯಂಫೊಟೆರಿಸಿನ್–ಬಿ ಔಷಧಿ ಅಗತ್ಯವಾಗಿದೆ. ಭಾರತದಲ್ಲಿ ಈ ಔಷಧಿಯ ಕೊರತೆ ನೀಗುವವರೆಗೂ ಕೇಂದ್ರ ಸರ್ಕಾರವು ಸುಂಕ ಮನ್ನಾ ಮಾಡುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೈಕೋರ್ಟ್ ಸಲಹೆ ನೀಡಿದೆ.
ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿರುವ ಮ್ಯೂಕರ್‌ಮೈಕೊಸಿಸ್ ಸೋಂಕು ಚಿಕಿತ್ಸೆಗೆ 'ಆ್ಯಂಫೊಟೆರಿಸಿನ್–ಬಿ' ಔಷಧಿಯು ಅವಶ್ಯವಾಗಿದ್ದು, ಅದರ ಕೊರತೆಯು ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದರು.
'ಬ್ಲ್ಯಾಕ್ ಫಂಗಸ್ ಸೋಂಕು ಗುಣಪಡಿಸಲು ಬಳಸಲಾಗುತ್ತಿರುವ ಆ್ಯಂಫೊಟೆರಿಸಿನ್–ಬಿ ಔಷಧಿ ಕೊರತೆಯು ಆದಷ್ಟು ಬೇಗ ಪರಿಹಾರವಾಗಲಿದೆ. ಭಾರತದಲ್ಲಿಯೇ ಆ್ಯಂಫೊಟೆರಿಸಿನ್ ತಯಾರಿಸಲು 5 ಫಾರ್ಮಾ ಕಂಪನಿಗಳಿಗೆ ಮೂರು ದಿನಗಳಲ್ಲಿ ಅನುಮತಿ ದೊರೆತಿದೆ. ಈಗಾಗಲೇ ದೇಶದಲ್ಲಿ 6 ಫಾರ್ಮಾ ಕಂಪನಿಗಳು ಈ ಔಷಧಿಯನ್ನು ತಯಾರಿಸುತ್ತಿವೆ' ಎಂದು ಮಾಂಡವಿಯಾ ಟ್ವೀಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.