ನವದೆಹಲಿ: ಅತ್ಯಾಚಾರಕ್ಕೊಳಗಾದ ಮಹಿಳೆ ನ್ಯಾಯಾಲಯದ ಆದೇಶದಂತೆ ಗರ್ಭಪಾತಕ್ಕೆ ಒಳಗಾಗಬೇಕಾದಲ್ಲಿ ಅಂಥವರ ಗುರುತಿನ ಪುರಾವೆಯನ್ನು ಹಾಜರುಪಡಿಸಲು ಆಸ್ಪತ್ರೆಗಳು ಒತ್ತಾಯಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
‘ಇಂಥ ಪ್ರಕರಣಗಳು ಅತ್ಯಂತ ಸೂಕ್ಷ್ಮವಾದದ್ದು. ಮುಖ್ಯವಾಗಿ ಅಪ್ರಾಪ್ತರು ಬಂದಲ್ಲಿ ಅವರ ಗುರುತನ್ನು ಸಾಬೀತುಪಡಿಸುವ ದಾಖಲೆಗಳನ್ನು ಆಸ್ಪತ್ರೆಗಳು ಕೇಳಬಾರದು’ ಎಂದು ನ್ಯಾ. ಸ್ವರ್ಣಕಾಂತ ಶರ್ಮ ಅವರಿದ್ದ ಪೀಠವು ಆಸ್ಪತ್ರೆಗಳಿಗೆ ನಿರ್ದೇಶಿಸಿದೆ.
‘ಕಾರ್ಯವಿಧಾನಗಳ ಕುರಿತು ಸ್ಪಷ್ಟತೆಯ ಕೊರತೆ, ಗುರುತಿನ ದಾಖಲೆ ಹಾಜರುಪಡಿಸಲು ಒತ್ತಾಯ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಂತ ಅಗತ್ಯ ವೈದ್ಯಕೀಯ ತಪಾಸಣೆಗೆ ವಿಳಂಬ ಮಾಡುವುದರಿಂದ ಪ್ರಕರಣವು ಇನ್ನಷ್ಟು ಜಟಿಲಗೊಳ್ಳುತ್ತಾ ಸಾಗಲಿದೆ. ಆದರೆ ಇಂಥ ಪ್ರಕರಣಗಳಲ್ಲಿ ಸಂತ್ರಸ್ತೆಯು ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟವರು ಎಂಬ ಸೂಕ್ಷ್ಮವನ್ನು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ನ್ಯಾಯಾಲಯ ಹೇಳಿದೆ.
‘ವೈದ್ಯಕೀಯ ಮಾನದಂಡಗಳು ಶಾಸನಬದ್ಧ ಕಟ್ಟುಪಾಡುಗಳಿಗೆ ಜೋತುಬೀಳದೆ, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಎದುರಿಸುತ್ತಿರುವ ಕ್ಲಿಷ್ಟಕರ ಸನ್ನಿವೇಶವನ್ನು ಅರಿತು, ಸಹಾನುಭೂತಿಯಿಂದ ವರ್ತಿಸಬೇಕು’ ಎಂದು ಪೀಠ ಹೇಳಿದೆ.
‘ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಬದುಕುಳಿದ ಸಂತ್ರಸ್ತೆ ಗರ್ಭಿಣಿಯಾಗಿದ್ದರೆ ಅಂಥ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಸ್ಪಷ್ಟತೆ ಮತ್ತು ಏಕರೂಪತೆ ಇರಬೇಕು’ ಎಂದು ಈ ಪ್ರಕರಣದಲ್ಲಿ ಭಾಗಿಯಾಗುವ ಎಲ್ಲಾ ಇಲಾಖೆಗಳಿಗೂ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
‘ಒಂದೊಮ್ಮೆ ಸಂತ್ರಸ್ತೆ 24 ವಾರಗಳ ಗರ್ಭಿಣಿಯಾಗಿದ್ದಲ್ಲಿ ತ್ವರಿತವಾಗಿ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು. ನ್ಯಾಯಾಲಯದ ಯಾವುದೇ ನಿರ್ದೇಶನಗಳಿಗೆ ಕಾಯದೆ ತ್ವರಿತವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು. ವಿಳಂಬವಿಲ್ಲದೆ ವರದಿ ಸಿದ್ದಪಡಿಸಿ ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸಬೇಕು’ ಎಂದು ಪೀಠ ಹೇಳಿತು.
ಪ್ರಕರಣ ಒಂದರಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಗೆ ನ್ಯಾಯಾಲಯದ ಸೂಕ್ತ ನಿರ್ದೇಶನವಿಲ್ಲದೆ ಚಿಕಿತ್ಸೆ ನಿರಾಕರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಈ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಸೂಕ್ತ ಗುರುತಿನ ಪುರಾವೆ ಇಲ್ಲದೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಲಾಗದು ಎಂದು ವೈದ್ಯಕೀಯ ತಜ್ಞರು ಹೇಳಿದ್ದರು. ಇದರಿಂದಾಗಿ ಬಾಲಕಿಯ ಗರ್ಭಾವಸ್ಥೆ 24 ವಾರಗಳನ್ನು ಮೀರಿತ್ತು.
ಇದನ್ನು ಪರಿಗಣಿಸಿದ ಹೈಕೋರ್ಟ್ ತುರ್ತಾಗಿ ಗರ್ಭಪಾತ ಪ್ರಕ್ರಿಯೆ ನಡೆಸುವಂತೆ ಏಮ್ಸ್‌ಗೆ ಮೇ 5ರಂದು ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.