ADVERTISEMENT

ಕುಸ್ತಿ ಪಟು ನಿಶಾ ದಹಿಯಾ ಹತ್ಯೆ: ಇಬ್ಬರನ್ನು ಬಂಧಿಸಿದ ದೆಹಲಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 16:47 IST
Last Updated 12 ನವೆಂಬರ್ 2021, 16:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹರಿಯಾಣದ ಸೋನಿಪತ್‌ನ ಕುಸ್ತಿ ಅಕಾಡೆಮಿಯಲ್ಲಿ ನಡೆದಿದ್ದ ವಿಶ್ವವಿದ್ಯಾಲಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಮತ್ತು ಸೋದರನ ಹತ್ಯೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ದ್ವಾರಕಾದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಂಧಿತರನ್ನು ರೋಹ್ಟಕ್ ನಿವಾಸಿ ಕುಸ್ತಿ ಅಕಾಡೆಮಿಯಲ್ಲಿ ತರಬೇತುದಾರನಾಗಿದ್ದ ಪವನ್ ಬರಾಕ್(25) ಮತ್ತು ಸಚಿನ್ ದಹಿಯಾ (23) ಎಂದು ಗುರುತಿಸಲಾಗಿದೆ.

ಹತ್ಯೆಗೆ ಬಳಸಿದ್ದ ರಿವಾಲ್ವರ್ ಅನ್ನು ಬರಾಕ್‌ನಿಂದ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕುಸ್ತಿ ಅಕಾಡೆಮಿಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ನಿಶಾ ದಹಿಯಾ ಮತ್ತು ಸೋದರ ಸೂರಜ್ ಹತ್ಯೆಗೀಡಾಗಿದ್ದರೆ, ತಾಯಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ತಾಯಿಯನ್ನು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಧಿತ ಸಚಿನ್ ದಹಿಯಾ ಈ ಹಿಂದೆ ಶಸ್ತ್ರಾಸ್ತ್ರ ಕಾಯ್ದೆಯಡಿ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಪಟು ನಿಶಾ ದಹಿಯಾ ಅವರು ಸುಶೀಲ್ ಕುಮಾರ್ ಕುಸ್ತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಈ ಅಕಾಡೆಮಿಯು ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.

ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅಕಾಡೆಮಿಯ ತರಬೇತುದಾರ ಪವನ್ ಬರಾಕ್ ಮತ್ತು ಇತರರು ಆರು ಬಾರಿ ಗುಂಡು ಹಾರಿಸಿದ್ದಾರೆ. ಈ ವೇಳೆ ನಿಶಾ ಅವರ ದೇಹ ಅಕಾಡೆಮಿಯ ಗೇಟಿನ ಬಳಿ ಬಿದ್ದಿದ್ದರೆ, ಅವರ ತಾಯಿ ಅಲ್ಲಿಂದ 100-200 ಮೀಟರ್ ದೂರದಲ್ಲಿ ಬಿದ್ದಿದ್ದರು.

ಸಂತ್ರಸ್ತರು ಖರ್ಕೋದಾ ಉಪವಿಭಾಗದ ಹಾಲಾಲ್‌ಪುರ ನಿವಾಸಿಗಳಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಕುಸ್ತಿ ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.