ADVERTISEMENT

ಮೂಸೆವಾಲಾ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ

ಪಿಟಿಐ
Published 4 ಜುಲೈ 2022, 12:15 IST
Last Updated 4 ಜುಲೈ 2022, 12:15 IST
.
.   

ನವದೆಹಲಿ (ಪಿಟಿಐ):ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ದೆಹಲಿ ಪೊಲೀಸ್‌ನ ವಿಶೇಷ ಘಟಕ ಭಾನುವಾರ ರಾತ್ರಿ ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಆರೋಪಿ, ಮೂಸೆವಾಲಾ ಅವರಿಗೆ ಸಮೀಪದಿಂದ ಗುಂಡು ಹಾರಿಸಿದವನಾಗಿದ್ದಾನೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯಿ ಮತ್ತುಗೋಲ್ಡಿ ಬ್ರಾರ್ ಗುಂಪಿನ ಸಹಚರರು ಮತ್ತು ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಅಂಕಿತ್‌ ಮತ್ತು ಸಚಿನ್‌ ಭಿವಾನಿ ಬಂಧಿತ ಆರೋಪಿಗಳು. ಈ ಮೂಲಕ ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಇಲ್ಲಿವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮೂಸೆವಾಲಾ ಅವರ ಮೇಲೆ ಗುಂಡು ಹಾರಿಸಿದವರ ಪೈಕಿ ಅಂಕಿತ್‌ ಸಹ ಒಬ್ಬ. ಮತ್ತೊಬ್ಬ ಆರೋಪಿಯಾದ ಭಿವಾನಿ, ನಾಲ್ವರು ಶೂಟರ್‌ಗಳಿಗೆ ಆಶ್ರಯ ನೀಡುವ ಜವಾಬ್ದಾರಿ ಹೊಂದಿದ್ದ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ADVERTISEMENT

ಹರಿಯಾಣ ಮೂಲದ ಭಿವಾನಿ ರಾಜಸ್ಥಾನದಲ್ಲಿ ಲಾರೆನ್ಸ್‌ ಬಿಷ್ಣೋಯಿ ಗುಂಪಿನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದನು. ಈತನು ರಾಜಸ್ಥಾನದ ಚುರು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದ ಪ್ರಮುಖ ಆರೋಪಿ ಎಂದು ಅವರು ಹೇಳಿದ್ದಾರೆ.

ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ, ಮಧ್ಯಪ್ರದೇಶ, ಜಾರ್ಖಂಡ್‌, ಉತ್ತರ ಪ್ರದೇಶ, ಹರಿಯಾಣ, ಗುಜರಾತ್‌ ಮತ್ತು ದೆಹಲಿಗೆ ಕಳುಹಿಸಲಾಗಿತ್ತು. ಈಗ ಬಂಧಿಸಿರುವ ಆರೋಪಿಗಳಿಂದ ದೊರೆಯುವ ಸುಳಿವುಗಳನ್ನು ಆಧರಿಸಿ ತಂಡಗಳು ಕಾರ್ಯಾಚರಣೆಯನ್ನು ಮುಂದುವರಿಸಲಿವೆ ಎಂದು ವಿಶೇಷ ಪೊಲೀಸ್‌ ಕಮಿಷನರ್‌ (ವಿಶೇಷ ಘಟಕ) ಎಚ್‌.ಜಿ.ಎಸ್‌. ಧಲಿವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.