ADVERTISEMENT

ಪಾಕ್ ಉಗ್ರರ ಭಾರಿ ಷಡ್ಯಂತ್ರ ಬಯಲಿಗೆಳೆದ ದೆಹಲಿ ಪೊಲೀಸ್, ಆರು ಮಂದಿ ಸೆರೆ

ಐಎಸ್‌ಐ ಬೆಂಬಲದಲ್ಲಿ ಸ್ಫೋಟದ ಷಡ್ಯಂತ್ರ l ಆರು ಮಂದಿ ಸೆರೆ l ದೆಹಲಿ ಪೊಲೀಸರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 1:33 IST
Last Updated 15 ಸೆಪ್ಟೆಂಬರ್ 2021, 1:33 IST
   

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಕೃತ್ಯದ ಷಡ್ಯಂತ್ರವನ್ನು ಬಯಲಿಗೆಳೆದಿರುವುದಾಗಿ ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಆರು ಜನರನ್ನು ಬಂಧಿಸಿದ್ದರಿಂದಾಗಿ ಈ ಸಂಚು ವಿಫಲವಾಗಿದೆ. ಬಂಧಿತರಲ್ಲಿ ಇಬ್ಬರು ತರಬೇತಿಗಾಗಿ ಪಾಕಿಸ್ತಾನಕ್ಕೆ ಈ ವರ್ಷದ ಆರಂಭದಲ್ಲಿ ಹೋಗಿದ್ದರು. ನವರಾತ್ರಿ ಮತ್ತು ರಾಮಲೀಲಾ ಆಚರಣೆ ಸಂದರ್ಭದಲ್ಲಿ ದಾಳಿ ನಡೆಸುವುದು ಇವರ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ ಪೊಲೀಸ್ ಇಲಾಖೆಯ ಭಯೋತ್ಪಾದನೆ ತಡೆ ವಿಶೇಷ ಘಟಕವು ಉಗ್ರರ ಸಂಚನ್ನು ಬಯಲು ಮಾಡಿತು.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ತಮ್ಮ ಅನೀಸ್‌ ಇಬ್ರಾಹಿಂ ಈ ಸಂಚಿಗೆ ಹಣ ಮತ್ತು ಇತರ ಸೌಲಭ್ಯ ಒದಗಿಸಿದ್ದಾನೆ. ಹವಾಲಾ ಮೂಲಕ ಹಣ ರವಾನೆ ಮಾಡಲಾಗಿದೆ. ಸ್ಫೋಟಕಗಳನ್ನು ಸುರಕ್ಷಿತವಾಗಿ ಗಡಿ ದಾಟಿಸಿ, ದೇಶದ ವಿವಿಧ ಭಾಗಗಳಿಗೆ ತಲುಪಿಸುವ ಕೆಲಸವನ್ನು ಅನೀಸ್‌ನ ಕಡೆಯವರು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ ಆರು ಮಂದಿಯನ್ನು ಬಂಧಿಸಲಾಯಿತು. ಕೇಂದ್ರದ ಸಂಸ್ಥೆಗಳು ನೀಡಿದ್ದ ಗುಪ್ತಚರ ಮಾಹಿತಿ ಅನ್ವಯ ಈ ಕಾರ್ಯಾಚರಣೆ ನಡೆಯಿತು ಎಂದು ವಿಶೇಷ ಘಟಕದ ಆಯುಕ್ತ ನೀರಜ್‌ ಠಾಕೂರ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿತರನ್ನು ಜಾನ್‌ ಮೊಹಮ್ಮದ್‌ ಶೇಖ್‌ ಅಲಿಯಾಸ್‌ ಸಮೀರ್‌ ಕಾಲಿಯಾ (47), ಒಸಾಮಾ (22), ಮೂಲ್‌ಚಂದ್‌ ಅಲಿಯಾಸ್‌ ಲಾಲಾ (47), ಝೀಶನ್‌ ಕಮರ್‌ (28), ಮೊಹಮ್ಮದ್‌ ಅಬು ಬಕರ್‌ (23) ಮತ್ತು ಮೊಹಮ್ಮದ್‌ ಅಮೀರ್‌ ಜಾವೇದ್‌ (31) ಎಂದು ಗುರುತಿಸಲಾಗಿದೆ.

ಇವರಲ್ಲಿ ಒಸಾಮಾ ಮತ್ತು ಝೀಶನ್‌ ಅವರು ಪಾಕಿಸ್ತಾನದಲ್ಲಿ 15 ದಿನಗಳ ತರಬೇತಿ ಪಡೆದಿದ್ದಾರೆ. ಎಕೆ–47 ಬಂದೂಕು ಬಳಕೆ, ಸ್ಫೋಟಕ ಬಳಕೆಯಲ್ಲಿ ಇವರಿಗೆ ತರಬೇತಿ ನೀಡಲಾಗಿದೆ. ಒಸಾಮಾ ಏಪ್ರಿಲ್‌ 22ರಂದು ಹೋಗಿ ಝೀಶನ್‌ನನ್ನು ಒಮಾನ್‌ನಲ್ಲಿ ಭೇಟಿಯಾಗಿದ್ದ.
ಅಲ್ಲಿಂದ ಅವರು ಹಡಗು ಮತ್ತು ದೋಣಿಯ ಮೂಲಕ ಪಾಕಿಸ್ತಾನ ತಲುಪಿದ್ದರು ಎಂದು ಠಾಕೂರ್‌ ಮಾಹಿತಿ ನೀಡಿದ್ದಾರೆ.

ಬಾಂಗ್ಲಾ ಭಾಷೆ ಮಾತನಾಡುತ್ತಿದ್ದ 14–15 ಮಂದಿ ತಮ್ಮಂತೆಯೇ ತರಬೇತಿಗೆ ಪಾಕಿಸ್ತಾನಕ್ಕೆ ಹೋಗಿದ್ದರು. ಇದೆಲ್ಲವನ್ನೂ ಗಡಿಯಾಚಿನಿಂದಲೇ ನಡೆಸಲಾಗಿದೆ ಎಂದು ಬಂಧಿತರು ಮಾಹಿತಿ ನೀಡಿದ್ಧಾಗಿ ಪೊಲೀಸರು ಹೇಳಿ ದ್ದಾರೆ. ಇವರು ಯಾವ ದೇಶದವರು ಎಂಬುದನ್ನು ಠಾಕೂರ್‌ ತಿಳಿಸಿಲ್ಲ.

ಅನೀಸ್‌ ಇಬ್ರಾಹಿಂ ಶಾಮೀಲು ಆಗಿರುವುದರಿಂದ ಉಗ್ರರ ಕಾರ್ಯಾಚರಣೆಗೆ ಭೂಗತ ನಂಟು ಕೂಡ ಸಿಕ್ಕಂತಾಗಿದೆ.

ಬಂಧಿತರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಇಟಲಿ ನಿರ್ಮಿತ ಪಿಸ್ತೂಲ್‌ ಗಳು ಕೂಡ ಸೇರಿವೆ. ಗುಂಡು ಹಾರಾಟ
ದ ಮೂಲಕ ಜನರ ಹತ್ಯೆಯ ಪಿತೂರಿ ಯನ್ನೂ ಇವರು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯೂ ಇವರ ಗುರಿ ಆಗಿರಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜಸ್ಥಾನದ ಕೋಟದಿಂದ ಬಂಧಿತನಾದ ಸಮೀರ್‌ಗೆ ಅನೀಸ್‌ ಜತೆಗೆ ಹತ್ತಿರದ ನಂಟು ಇದೆ. ಸ್ಫೋಟಕಗಳನ್ನು ಸುರಕ್ಷಿತವಾಗಿ ತಲುಪಿಸು ವುದು ಈತನ ಹೊಣೆಯಾಗಿತ್ತು. ದೆಹಲಿಯ ಜಾಮಿಯಾ ನಗರದಲ್ಲಿ ಸಿಕ್ಕ ಒಸಾಮಾ ಮತ್ತು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಸಿಕ್ಕ ಝೀಶನ್ ಅವರಿಗೆ ಸ್ಫೋಟ ನಡೆಸಲು ಸೂಕ್ತವಾದ ಸ್ಥಳವನ್ನು ಗುರುತಿಸುವ ಹೊಣೆ ವಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ದಮನಕ್ಕೆ ಅಮೆರಿಕ–ಭಾರತ ಸಹಕಾರ

ಅಫ್ಗಾನಿಸ್ತಾನದ ಒಳಗೆ ಮತ್ತು ಹೊರಗೆ ಇರುವ ಉಗ್ರರ ಮೇಲೆ ನಿಗಾ ಇರಿಸುವುದಕ್ಕಾಗಿ ಮತ್ತು ದಾಳಿ ನಡೆಸುವುದಕ್ಕಾಗಿ ಭಾರತದ ವಾಯುನೆಲೆಗಳನ್ನು ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಸುಳಿವನ್ನು ಅಮೆರಿಕ ನೀಡಿದೆ.

ಭಾರತದ ಜತೆಗೆ ನಿಕಟವಾದ ಸಂಪರ್ಕದಲ್ಲಿ ಅಮೆರಿಕ ಇದೆ ಎಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರುಅಮೆರಿಕ ಸಂಸತ್ತಿನ ಕೆಳಮನೆಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ಅಫ್ಗಾನಿಸ್ತಾನ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಅಮೆರಿಕಕ್ಕೆ ಇರುವ ಅಪಾಯವನ್ನು ನಿರ್ಮೂಲನಗೊಳಿಸಲು ವಾಯವ್ಯ ಭಾರತದ ವಾಯುನೆಲೆಗಳನ್ನು ಬಳಸುವ ಚಿಂತನೆ ಇದೆಯೇ ಎಂಬ ‍ಪ್ರಶ್ನೆಗೆ ಬ್ಲಿಂಕನ್‌ ಹೀಗೆ ಉತ್ತರಿಸಿದ್ದಾರೆ. ಆದರೆ, ಎರಡೂ ದೇಶಗಳ ನಡುವೆ ನಡೆದಿರುವ ಮಾತುಕತೆಯ ವಿವರಗಳನ್ನು ಬ್ಲಿಂಕನ್‌ ಅವರು ಸಮಿತಿಗೆ ತಿಳಿಸಿಲ್ಲ.ಈ ವಿಚಾರದಲ್ಲಿ ಭಾರತವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತವು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ದೇಶ. ಎರಡೂ ದೇಶಗಳ ನಡುವೆ 2016ರಲ್ಲಿ ಸೌಕರ್ಯ ವಿನಿಮಯ ಒಪ್ಪಂದವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.