ADVERTISEMENT

ಬುಲ್ಲಿ ಬಾಯಿ, ಸುಲ್ಲಿ ಡೀಲ್ಸ್ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸರು

ಐಎಎನ್ಎಸ್
Published 9 ಮಾರ್ಚ್ 2022, 2:55 IST
Last Updated 9 ಮಾರ್ಚ್ 2022, 2:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾನಹಾನಿ ಮಾಡಲಾದ 'ಬುಲ್ಲಿ ಬಾಯಿ' ಮತ್ತು 'ಸುಲ್ಲಿ ಡೀಲ್ಸ್' ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ದೆಹಲಿ ಪೊಲೀಸರ ವಿಶೇಷ ಘಟಕದ ಗುಪ್ತಚರ ಮತ್ತು ಕಾರ್ಯತಂತ್ರದ ಕಾರ್ಯಾಚರಣೆ (IFSO) ಘಟಕಗಳು ಪ್ರಕರಣದ ತನಿಖೆಯನ್ನು ಕೈಗೊಂಡಿವೆ.

ಮೂಲಗಳ ಪ್ರಕಾರ, ಪೊಲೀಸರು ಮಾ. 4ರಂದು ದೆಹಲಿಯ ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬುಲ್ಲಿಬಾಯಿ ಆ್ಯಪ್‌ ಪ್ರಕರಣ ಸಂಬಂಧ 2,000 ಪುಟಗಳು ಮತ್ತು ಸುಲ್ಲಿ ಡೀಲ್ಸ್ ಪ್ರಕರಣ ಸಂಬಂಧ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ.

ADVERTISEMENT

'ಸುಲ್ಲಿ ಡೀಲ್ಸ್' ಮೊಬೈಲ್ ಅಪ್ಲಿಕೇಶನ್ 2021ರ ಜುಲೈನಲ್ಲಿ ಕಾಣಿಸಿಕೊಂಡಿತ್ತು. ಇದರಲ್ಲಿ ನೂರಕ್ಕೂ ಅಧಿಕ ಖ್ಯಾತ ಮುಸ್ಲಿಂ ಮಹಿಳೆಯರ ಕುರಿತು ಮಾಹಿತಿ ನೀಡಿ ಬಳಕೆದಾರರು ಅವರ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಹೇಳಲಾದ ಒಕ್ಕಣೆ ನೀಡಲಾಗಿತ್ತು.

ಇದಾದ ಆರು ತಿಂಗಳ ತರುವಾಯ ಇದೇ ರೀತಿಯ ಮತ್ತೊಂದು ಆ್ಯಪ್ ‘ಬುಲ್ಲಿ ಬಾಯಿ’ ನಲ್ಲಿ ಕೂಡ 100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಲಾಗಿತ್ತು.

ಈ ಸಂಬಂಧ ಪತ್ರಕರ್ತೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಮುಂಬೈನ ಸೈಬರ್‌ ಕ್ರೈಂ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದರು. ಬಳಿಕ ‘ಬುಲ್ಲಿ ಬಾಯ್’ಆ್ಯಪ್‌ ಅನ್ನು ನಿರ್ಬಂಧಿಸಿರುವುದಾಗಿ ಗಿಟ್‌ಹಬ್‌ ವೇದಿಕೆ ದೃಢಪಡಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯಿ ಎಂಬಾತ ಬುಲ್ಲಿ ಬಾಯಿ ಆ್ಯಪ್ ಅನ್ನು ಸೃಷ್ಟಿಸಿದ್ದ ಮತ್ತು ಓಂಕಾರೇಶ್ವರ ಠಾಕೂರ್‌ ಎಂಬಾತ ಸುಲ್ಲಿ ಡೀಲ್ಸ್ ಎಂಬ ಆ್ಯಪ್ ಅನ್ನು ತಯಾರಿಸಿದ್ದ. ಇವರಿಬ್ಬರನ್ನು ದೆಹಲಿ ಪೊಲೀಸರು ಜನವರಿ 6 ಮತ್ತು ಜನವರಿ 8 ರಂದು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.