ADVERTISEMENT

₹2,000 ಕೋಟಿ ಭ್ರಷ್ಟಾಚಾರ ಆರೋಪ: ಸಿಸೋಡಿಯಾ, ಜೈನ್ ವಿರುದ್ಧ ಎಸಿಬಿ ಪ್ರಕರಣ

ಪಿಟಿಐ
Published 30 ಏಪ್ರಿಲ್ 2025, 11:22 IST
Last Updated 30 ಏಪ್ರಿಲ್ 2025, 11:22 IST
<div class="paragraphs"><p>ಸತ್ಯೇಂದ್ರ ಜೈನ್‌&nbsp;ಹಾಗೂ ಮನೀಷ್‌&nbsp;ಸಿಸೋಡಿಯಾ</p></div>

ಸತ್ಯೇಂದ್ರ ಜೈನ್‌ ಹಾಗೂ ಮನೀಷ್‌ ಸಿಸೋಡಿಯಾ

   

-ಪಿಟಿಐ ಚಿತ್ರ

ನವದೆಹಲಿ: ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ ನಾಯಕರಾದ ಮನೀಷ್‌ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್‌ ವಿರುದ್ಧ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿದೆ. 

ADVERTISEMENT

‘ಇದು ಸುಮಾರು ₹2000 ಕೋಟಿ ಹಗರಣವೆಂದು ಅಂದಾಜಿಸಲಾಗಿದೆ. ದೆಹಲಿಯಾದ್ಯಂತ ಒಟ್ಟು 12,748 ಶಾಲಾ ಕೊಠಡಿಗಳನ್ನು ಹಾಗೂ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಇದಾಗಿತ್ತು. ಇದರ ಅಡಿ ಪ್ರತಿ ಕೊಠಡಿಯನ್ನು ₹24.86 ಲಕ್ಷ ವೆಚ್ಚದಂತೆ ನಿರ್ಮಿಸಲಾಗಿದೆ. ಇದು ಸಾಮಾನ್ಯ ಖರ್ಚಿಗಿಂತ ಐದು ಪಟ್ಟು ಅಧಿಕವಾಗಿದ್ದು, ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ’ ಎಂದು ಎಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಸಿಸೋಡಿಯಾ ಶಿಕ್ಷಣ ಸಚಿವರಾಗಿದ್ದಾಗ ಹಾಗೂ ಜೈನ್‌ ಲೋಕೋಪಯೋಗಿ ಸಚಿವರಾಗಿದ್ದ ವೇಳೆ 34 ಗುತ್ತಿಗೆದಾರರಿಗೆ ಈ ಯೋಜನೆಯನ್ನು ಗುತ್ತಿಗೆ ನೀಡಲಾಗಿತ್ತು. ಇದರಲ್ಲಿ ಬಹುತೇಕರು ಎಎಪಿಯೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳೇ ಆಗಿದ್ದಾರೆ. ಒಂದು ಉತ್ತಮ ಕೊಠಡಿ ನಿರ್ಮಾಣಕ್ಕೆ ಅಂದಾಜು ₹5 ಲಕ್ಷ ವೆಚ್ಚವಾಗಲಿದೆ. ಆದರೆ ಪ್ರತಿ ಕೊಠಡಿ ನಿರ್ಮಾಣಕ್ಕೆ ₹24.86 ಲಕ್ಷದಂತೆ ಒಟ್ಟು ₹2,892 ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗಿದೆ.

2016ರ ಒಳಗಾಗಿ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಈ ಅವಧಿಯೊಳಗೆ ಒಂದೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಎಸಿಬಿ ಆರೋಪಿಸಿದೆ.    

ಇದು ರಾಜಕೀಯ ನಡೆ: ಎಎಪಿ ಆರೋಪ 

ಸಿಸೋಡಿಯಾ ಹಾಗೂ ಜೈನ್‌ ಅವರ ಮೇಲೆ ಒತ್ತಡ ಹೇರುವ ಮತ್ತು ಹೆದರಿಸುವ ಸಲುವಾಗಿ ಎಸಿಬಿ ಪ್ರಕರಣ ದಾಖಲಿಸಿದೆ ಎಂದು ಎಎಪಿಯು ಬುಧವಾರ ಆರೋಪಿಸಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ್‌ ಧಂಡಾ ‘ಇತ್ತೀಚೆಗೆ ಸಿಸೋಡಿಯಾ ಮತ್ತು ಜೈನ್‌ ಅವರನ್ನು ಪಕ್ಷದ ಪಂಜಾಬ್‌ ಘಟಕದ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಹೀಗಾ‌ಗಿ ಈ ಪ್ರಕರಣವು ಅವರನ್ನು ಹೆದರಿಸುವ ರಾಜಕೀಯ ನಡೆಯಾಗಿದೆ’ ಎಂದು ಆರೋಪಿಸಿದರು.  

ಹಿಂದಿನಿ ಎಎಪಿ ಸರ್ಕಾರದ ಆಡಳಿತದಲ್ಲಿ ದೆಹಲಿಯಲ್ಲಿ ಶಾಲೆಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಪಾತ್ರದ ಬಗ್ಗೆಯೂ ಎಸಿಬಿ ತನಿಖೆ ನಡೆಸಬೇಕು
-ವೀರೇಂದ್ರ ಸಚದೇವ್, ದೆಹಲಿ ಬಿಜೆಪಿ ಮುಖ್ಯಸ್ಥ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.