ADVERTISEMENT

ಮತದಾರರ ಪಟ್ಟಿಯಿಂದ ನನ್ನ ಪತ್ನಿ ಹೆಸರು ಅಳಿಸಲು BJP ಯತ್ನ:AAP ಸಂಸದ ಸಂಜಯ್ ಸಿಂಗ್

ಪಿಟಿಐ
Published 29 ಡಿಸೆಂಬರ್ 2024, 10:11 IST
Last Updated 29 ಡಿಸೆಂಬರ್ 2024, 10:11 IST
<div class="paragraphs"><p>ಸಂಜಯ್ ಸಿಂಗ್</p></div>

ಸಂಜಯ್ ಸಿಂಗ್

   

ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ನನ್ನ ಪತ್ನಿಯ ಹೆಸರನ್ನು ತೆಗೆದು ಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ(ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,‘ನನ್ನ ಪತ್ನಿ ಅನಿತಾ ಸಿಂಗ್ ಸೇರಿದಂತೆ ದೆಹಲಿಯಲ್ಲಿ ನೆಲೆಸಿರುವ ಪೂರ್ವಾಂಚಲಿ ಸಮುದಾಯದವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಬಿಜೆಪಿ ಹುನ್ನಾರ ನಡೆಸುತ್ತಿದೆ’ ಎಂದು ಹೇಳಿದರು.

ADVERTISEMENT

ಸಂಜಯ್ ಸಿಂಗ್ ಮತ್ತು ಅವರ ಪತ್ನಿ ಅನಿತಾ ಸಿಂಗ್ ಪೂರ್ವ ಉತ್ತರ ಪ್ರದೇಶಕ್ಕೆ ಸೇರಿದ್ದರೆ, ಪೂರ್ವಾಂಚಲಿಗಳು ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದು ದಶಕಗಳಿಂದ ದೆಹಲಿಯಲ್ಲಿ ನೆಲೆಸಿದ್ದಾರೆ.

‘ಎಎಪಿ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರತಿನಿಧಿಸುವ ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ತಮ್ಮ ಪತ್ನಿಯ ಹೆಸರನ್ನು ಅಳಿಸಿ ಹಾಕಲು ಡಿಸೆಂಬರ್ 25 ಮತ್ತು 26 ರಂದು ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ’ ಎಂದು ಸಂಜಯ್ ಸಿಂಗ್‌ ಹೇಳಿದರು.

‘ಮತದಾರರ ಪಟ್ಟಿಯಿಂದ ಪೂರ್ವಾಂಚಲಿ ಸಮುದಾಯದವರ ಹೆಸರನ್ನು ತೆಗೆದುಹಾಕುತ್ತಿರುವ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಬಿಜೆಪಿಯು ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಅವರು ಹೇಳಿದರು.

‘ಡಿಸೆಂಬರ್‌ ಮಧ್ಯಭಾಗದಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಿಂದ ಸುಮಾರು 5 ಸಾವಿರ ಮತದಾರರ ಹೆಸರನ್ನು ಅಳಿಸಿ ಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿದೆ’ ಎಂದು ಭಾನುವಾರ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.

ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳ ಹೆಸರನ್ನು ಎಎಪಿಯ ಆದೇಶದ ಮೇರೆಗೆ ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ಅಕ್ರಮ ವಲಸಿಗರನ್ನು ಎಎಪಿಯು ಮತಬ್ಯಾಂಕ್ ಆಗಿ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.