ADVERTISEMENT

ದೆಹಲಿ | ಭಾರತೀಯ ಉಡುಪು ಧರಿಸಿದ್ದಕ್ಕೆ ರೆಸ್ಟೋರೆಂಟ್‌ಗೆ ಪ್ರವೇಶ ನಿರಾಕರಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:59 IST
Last Updated 9 ಆಗಸ್ಟ್ 2025, 6:59 IST
   

ದೆಹಲಿ: ‘ಭಾರತೀಯ ಉಡುಪು ಧರಿಸಿದ್ದಕ್ಕಾಗಿ ದೆಹಲಿ ಪಿತಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್‌ವೊಂದು ನಮಗೆ ಪ್ರವೇಶ ನಿರಾಕರಿಸಿದೆ’ ಎಂದು ದಂಪತಿಯೊಬ್ಬರು ಆರೋಪಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಇತರರಿಗೆ ರೆಸ್ಟೋರೆಂಟ್‌ ಒಳಗೆ ಹೋಗಲು ಬಿಡುತ್ತಿದ್ದರು. ನಮಗೆ ಪ್ರವೇಶ ನಿರಾಕರಿಸಿದ್ದಾರೆ. ಉಡುಪು ನೋಡಿ ರೆಸ್ಟೋರೆಂಟ್‌ ಒಳಗೆ ಬಿಡುತ್ತಿದ್ದರು. ಅಲ್ಲದೇ ರೆಸ್ಟೋರೆಂಟ್‌ನ ವ್ಯವಸ್ಥಾಪಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ದಂಪತಿ ಆರೋಪಿಸಿದ್ದಾರೆ.

‘ಬಟ್ಟೆ ನೋಡಿ ಪ್ರವೇಶ ನೀಡುವುದು ಸರಿಯಲ್ಲ. ರೆಸ್ಟೋರೆಂಟ್‌ ಅನ್ನು ತಕ್ಷಣ ಮುಚ್ಚಿ’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಏತನ್ಮಧ್ಯೆ, ಈ ಆರೋಪವನ್ನು ರೆಸ್ಟೋರೆಂಟ್ ಮಾಲೀಕ ನೀರಜ್ ಅಗರ್ವಾಲ್ ನಿರಾಕರಿಸಿದ್ದಾರೆ.

‘ದಂಪತಿ ಟೇಬಲ್ ಬುಕ್ ಮಾಡಿರಲಿಲ್ಲ. ಅದಕ್ಕಾಗಿಯೇ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಇಂತಹದೇ ಉಡುಪು ಧರಿಸಿ ಬರಬೇಕು ಎಂಬ ನಿಯಮ ನಮ್ಮ ರೆಸ್ಟೋರೆಂಟ್‌ನಲ್ಲಿ ಇಲ್ಲ. ಎಲ್ಲಾ ಗ್ರಾಹಕರನ್ನು ಪ್ರೀತಿಯಿಂದ ಸ್ವಾಗತಿಸಲಾಗುತ್ತದೆ’ ಎಂದಿದ್ದಾರೆ.

ಇನ್ನು, ದಂಪತಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕಪಿಲ್ ಮಿಶ್ರಾ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಈ ವಿಷಯದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.