ADVERTISEMENT

ದೆಹಲಿ ಗಲಭೆ ಆರೋಪಿಗಳ ಜಾಮೀನು ಬಾಂಡ್‌ ಪರಿಶೀಲನೆಗೆ ಆದೇಶ

ಪಿಟಿಐ
Published 6 ಜನವರಿ 2026, 16:01 IST
Last Updated 6 ಜನವರಿ 2026, 16:01 IST
   

ನವದೆಹಲಿ: 2020ರ ದೆಹಲಿ ಗಲಭೆಗೆ ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದ ಐವರು ಆರೋಪಿಗಳ ಪೈಕಿ ನಾಲ್ವರು ಸಲ್ಲಿಸಿದ ದಾಖಲೆಗಳು ಮತ್ತು ಶ್ಯೂರಿಟಿಗಳನ್ನು ಪರಿಶೀಲಿಸಲು ದೆಹಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದ್ದು, ಅವರ ಬಿಡುಗಡೆ ಒಂದು ದಿನ ವಿಳಂಬವಾಗಿದೆ.

ಗುಲ್‌ಫಿಷಾ ಫಾತಿಮಾ, ಮೀರನ್‌ ಹೈದರ್‌, ಶಿಫಾ ಉರ್‌ ರೆಹಮಾನ್‌, ಮೊಹಮದ್‌ ಸಲೀಂ ಖಾನ್‌ ಮತ್ತು ಶಾದಾಬ್‌ ಅಹ್ಮದ್‌ ಅವರಿಗೆ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್‌ 11 ಷರತ್ತುಗಳನ್ನು ವಿಧಿಸಿತ್ತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಮೀರ್‌ ಬಾಜಪೈ ಅವರು ಗುಲ್‌ಫಿಷಾ ಫಾತಿಮಾ, ಮೀರನ್‌ ಹೈದರ್‌, ಶಿಫಾ ಉರ್‌ ರೆಹಮಾನ್‌ ಮತ್ತು ಮೊಹಮದ್‌ ಸಲೀಂ ಖಾನ್‌ ಸಲ್ಲಿಸಿದ ತಲಾ ₹2 ಲಕ್ಷ ಮೊತ್ತದ ಜಾಮೀನು ಬಾಂಡ್‌ಗಳು ಮತ್ತು ಇಬ್ಬರ ಶ್ಯೂರಿಟಿಗಳನ್ನು ಅಂಗೀಕರಿಸಿದರು. ಬುಧವಾರದೊಳಗೆ ದಾಖಲೆಗಳನ್ನು ಪರಿಶೀಲಿಸುವಂತೆ ಪೊಲೀಸರಿಗೆ ಸೂಚಿಸಿದರು.

ADVERTISEMENT

ಐದನೇ ಆರೋಪಿ ಶಾದಾಬ್‌ ಅಹ್ಮದ್‌ ಜಾಮೀನು ಬಾಂಡ್‌ ಸಲ್ಲಿಸಲು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.

ದಾಖಲೆ ಪರಿಶೀಲನೆಯ ಅಗತ್ಯವನ್ನು ಪ್ರಶ್ನಿಸಿದ ಮೀರನ್‌ ಹೈದರ್‌ ಪರ ವಕೀಲ ಎಂ.ಎನ್. ಖಾನ್‌, ಶ್ಯೂರಿಟಿ ಬಾಂಡ್‌ ಸಲ್ಲಿಸಿದ ವ್ಯಕ್ತಿ ತನ್ನ ಕಕ್ಷಿದಾರರ ಸಂಬಂಧಿಯಾಗಿದ್ದು, ಅದೇ ನಿವಾಸದಲ್ಲಿ ವಾಸಿಸುತ್ತಿದ್ದಾರೆ ಎಂದು ವಾದಿಸಿದರು. ನಂತರ, ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿತು.

ಪ್ರಕರಣದ ಆರೋಪಿಗಳಾದ ಉಮರ್‌ ಖಾಲಿದ್‌ ಮತ್ತು ಶರ್ಜೀಲ್‌ ಇಮಾಮ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಜಾಮೀನು ನಿರಾಕರಿಸಿತ್ತು. ಇತರ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.