ADVERTISEMENT

ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸಿದ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌

ಪಿಟಿಐ
Published 6 ಸೆಪ್ಟೆಂಬರ್ 2021, 10:36 IST
Last Updated 6 ಸೆಪ್ಟೆಂಬರ್ 2021, 10:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯಎಪಿಎ) ಬಂಧಿತರಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌, ಪೊಲೀಸರ ಆಕ್ಷೇಪಣೆ ಮೇರೆಗೆ ಈ ಮೊದಲು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿ ಸಮರ್ಪಕವಾಗಿಲ್ಲ ಎಂದು ಪೊಲೀಸರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಉಮರ್ ಪರ ವಕೀಲ ತ್ರಿದೀಪ್ ಪೈಸ್‌ ಅವರು, ಈ ಹಿಂದೆ ಸಿಆರ್‌ಪಿಸಿ 437 ಅಡಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಸಿಆರ್‌ಪಿಸಿ 439ರ ಅಡಿಯಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂದು ಪ್ರಕರಣ ವಿಚಾರಣೆಗಾಗಿ ನಿಯೋಜಿಸಿರುವ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಮಿತಾಭ್‌ ರಾವತ್‌ ಅವರಿಗೆ ತಿಳಿಸಿದರು.

ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್, ‘ನೀವು ಜಾಮೀನು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, ‘ಪ್ರಾಸಿಕ್ಯೂಷನ್ ಆಕ್ಷೇಪಣೆಗಳು ವಿಚಾರಣೆಯನ್ನು ವಿಳಂಬವಾಗಿಸುವ ತಂತ್ರವನ್ನು ಅನುಸರಿಸುತ್ತಿದೆ‘ ಎಂದು ದೂರಿದ್ದೀರಿ. ಪ್ರಾಸಿಕ್ಯೂಷನ್ ಅನ್ನು ಈ ರೀತಿ ಬಿಂಬಿಸುವುದು ನ್ಯಾಯೋಚಿತವಲ್ಲ‘ ಎಂದು ಆಕ್ಷೇಪಿಸಿದರು.

ADVERTISEMENT

ಅಮಿತ್‌ ಪ್ರಸಾದ್‌ ಅವರು ಆಕ್ಷೇಪಣೆ ಸಲ್ಲಿಸಿದ ನಂತರ, ಉಮರ್ ಖಾಲೀದ್ ಪರ ವಕೀಲರು ಹೊಸದಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ನ್ಯಾಯಾಧೀಶ ಅಮಿತಾಭ್‌ ರಾವತ್ ಅವರು ಹೊಸ ಜಾಮೀನು ಅರ್ಜಿಯ ಬಗ್ಗೆ ಪೊಲೀಸರ ಪ್ರತಿಕ್ರಿಯೆಯನ್ನು ಕೋರಿದರು. ನಂತರ ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.