ADVERTISEMENT

ದೆಹಲಿ | ರಸ್ತೆಬದಿ ಓಡಾಡುವ ಯುವತಿಯರಿಗೆ ಲೈಂಗಿಕ ಕಿರುಕುಳ: ಸ್ಕೂಟರ್ ಸವಾರನ ಬಂಧನ

ಪಿಟಿಐ
Published 17 ಸೆಪ್ಟೆಂಬರ್ 2025, 10:14 IST
Last Updated 17 ಸೆಪ್ಟೆಂಬರ್ 2025, 10:14 IST
   

ನವದೆಹಲಿ: ರಸ್ತೆಬದಿ ಓಡಾಡುವ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಆರೋಪಿಯೊಬ್ಬನನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವಾಯುವ್ಯ ದೆಹಲಿಯಲ್ಲಿ ರಸ್ತೆಬದಿ ಓಡಾಡುವ ಯುವತಿಯರಿಗೆ ಸ್ಕೂಟರ್‌ ಸವಾರನೊಬ್ಬ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಅಸ್ಸಾಂನ ಕಂಕನ್ ನಾಥ್ (31) ಎಂದು ಗುರುತಿಸಲಾಗಿದೆ. ಈತ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್‌) ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಸ್ಕೂಟರ್ ಸವಾರನೊಬ್ಬ ಎರಡು ದಿನಗಳಲ್ಲಿ ಎರಡು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ' ಎಂದು ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬರು ದೂರು ದಾಖಲಿಸಿದ್ದರು.

ADVERTISEMENT

500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿಂದ ಪಡೆದ ದೃಶ್ಯಾವಳಿಗಳನ್ನು ಹಾಗೂ ಇಲಾಖೆಯ 1.5 ಲಕ್ಷಕ್ಕೂ ಹೆಚ್ಚು ಸ್ಕೂಟರ್‌ಗಳ ಡೇಟಾವನ್ನು ಪರಿಶೀಲಿಸಿದ ಬಳಿಕ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಆರೋಪಿ ತಾನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದನು. ಆದರೆ ಸಿಸಿಟಿವಿ ದೃಶ್ಯಗಳನ್ನು ನೋಡಿದ ಮೇಲೆ ತಪ್ಪೊಪ್ಪಿಕೊಂಡನು. ಯುವತಿಯರ ಖಾಸಗಿ ಅಂಗಗಳನ್ನು ಮುಟ್ಟುವ ಮೂಲಕ ಲೈಂಗಿಕ ತೃಪ್ತಿ ‍ಪಡೆಯುತ್ತಿದ್ದೆ ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.