
ನವದೆಹಲಿ: ಹಸಿವಿನಿಂದ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿ ನಡೆದಿದೆ.
8 ದಿನಗಳಿಂದ ಆಹಾರ ಇಲ್ಲದೇ ಬಳಲಿ ಮೂವರು ಅಕ್ಕ ತಂಗಿಯರು ( 8 ವರ್ಷ, 4 ವರ್ಷ ಹಾಗೂ 2 ವರ್ಷದ ಹೆಣ್ಣು ಮಗು) ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಪೂರ್ವ ದೆಹಲಿಯ ಮಂಡಿವಾಲದಲ್ಲಿ ನೆಲೆಸಿದ್ದ ಈ ಕುಟುಂಬದ ಯಜಮಾನ ಸೈಕಲ್ ರಿಕ್ಷಾ ತಳ್ಳಿ ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಸೈಕಲ್ ರಿಕ್ಷಾ ಕಳ್ಳತನವಾಗಿದ್ದರಿಂದ ಅವರು ಕೆಲಸ ಹುಡುಕಿಕೊಂಡು ಹೊರಟ್ಟಿದ್ದರು. ಅವರು ಕಳೆದೊಂದು ವಾರದಿಂದ ಮನೆಗೆ ಬಂದಿರಲಿಲ್ಲ ಎಂದು ಅಕ್ಕ ಮಕ್ಕದ ಮನೆಯವರು ಮಾಹಿತಿ ನೀಡಿದ್ದಾರೆ.
ಹಸಿವಿನಿಂದ ನಿತ್ರಾಣಗೊಂಡು ಕೋಮಾ ಸ್ಥಿತಿಯಲ್ಲಿದ್ದ ಮಕ್ಕಳನ್ನು ಆಸ್ಪತ್ರೆಗೆ ತರಲಾಗಿತ್ತು. ಆ ಮೂರು ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಾವು ಹೇಗೆ ಸಂಭವಿಸಿತು ಎಂದು ತಾಯಿಯನ್ನು ಕೇಳಿದಾಗ ಅವರು ‘ನಮಗೆ ಊಟ ಕೊಡಿ’ ಎಂದು ಕೇಳಿದರು ಎಂದು ಪೊಲೀಸರ ತಿಳಿಸಿದ್ದಾರೆ.
ಕಳೆದ 15 ವರ್ಷಗಳ ಸೇವೆಯಲ್ಲಿ ಇಂತಹ ಪ್ರಕರಣವನ್ನೇ ನಾನು ಕಂಡಿಲ್ಲ, ರಾಷ್ಟ್ರ ರಾಜಧಾನಿಯಲ್ಲಿ ಮೂವರು ಮಕ್ಕಳು ಹಸಿವಿನಿಂದ ಮೃತಪಟ್ಟಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ.ಮೃತ ಮಕ್ಕಳ ತಾಯಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಕುರಿತಂತೆ ಎಎಪಿ ಸರ್ಕಾರ ತನಿಖೆಗೆ ಆದೇಶ ಮಾಡಿದೆ.
8 ವರ್ಷ ಮತ್ತು 4 ವರ್ಷದ ಹೆಣ್ಣು ಮಗುವಿಗೆ ಆರೋಗ್ಯ ಸರಿ ಇರಲಿಲ್ಲ. ಆ ಮಕ್ಕಳು ವಾಂತಿ, ಬೇಧಿಯಿಂದ ಬಳುತ್ತಿದ್ದವು ಎನ್ನಲಾಗಿದೆ. 8 ವರ್ಷವಾಗಿದ್ದರೂ ಹಿರಿಯ ಮಗಳನ್ನು ಶಾಲೆ ಸೇರಿಸಿರಲಿಲ್ಲ. ಒಂದು ವೇಳೆ ಶಾಲೆಗೆ ಹೋಗುತ್ತಿದ್ದಾರೆ ಮಧ್ಯಾಹ್ನದ ಊಟವಾದರೂ ದೊರೆಯುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.
ಈ ಕುಟುಂಬ ವಾಸವಾಗಿದ್ದ ಮನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಭೇಟಿ ಮಾಡಿ ಮಕ್ಕಳ ಸಾವಿಗೆ ಎಎಪಿ ಸರ್ಕಾರವೇ ಕಾರಣ ಎಂದು ದೂರಿದ್ದಾರೆ.
’ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ, ರಿಯಾಯಿತಿ ದರದಲ್ಲಿ ಕೇಂದ್ರ ಸರ್ಕಾರ ನೀಡುವ ಆಹಾರ ಪದಾರ್ಥಗಳನ್ನು ನಾಗರಿಕರಿಗೆ ಸಮರ್ಪಕವಾಗಿ ಹಂಚುವ ಕೆಲಸವನ್ನು ದೆಹಲಿ ಸರ್ಕಾರ ಮಾಡಿಲ್ಲ, ಈ ಮಕ್ಕಳ ಸಾವಿಗೆ ಎಎಪಿ ಸರ್ಕಾರವೇ ಕಾರಣ ಎಂದು ಬಿಜೆಪಿಯ ಮನೋಜ್ ತಿವಾರಿ ಹೇಳಿದ್ದಾರೆ.
ಈ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ, ಇದು ಸರ್ಕಾರ ಮತ್ತು ವ್ಯವಸ್ಥೆಯ ವೈಫಲ್ಯ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮೇಕನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.