
ನವದೆಹಲಿ: ಮಾನಸಿಕ ಕಿರುಕುಳದಿಂದ 10ನೇ ತರಗತಿಯ ವಿದ್ಯಾರ್ಥಿ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣವು ತೀವ್ರ ಪ್ರತಿಭಟನೆಗೆ ಕಾರಣವಾಯಿತು.
ದೆಹಲಿಯ ಸೈಂಟ್ ಕೊಲಂಬಸ್ ಶಾಲೆಯ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು, ದೂರಿನಲ್ಲಿ ಉಲ್ಲೇಖಿಸಲಾಗಿರುವ ಶಿಕ್ಷಕರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೃತ ವಿದ್ಯಾರ್ಥಿಯ ತಂದೆ ಕೂಡ ಪ್ರತಿಭಟನೆಯಲ್ಲಿ ಭಾಗಿಯಾದರು.
‘ಬಾಲಕನಿಗೆ ನ್ಯಾಯ ಸಿಗಲಿ‘, ‘ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಬೇಡ’ ಎಂಬ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು.
‘ತುಂಬಾ ದುಖಿಃತನಾಗಿದ್ದ ವಿದ್ಯಾರ್ಥಿಯು ಮನೆಗೆ ಹೋಗಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೆಟ್ರೊ ನಿಲ್ದಾಣದಲ್ಲಿ ಮರಣಪತ್ರವನ್ನು ಬರೆದಿದ್ದ’ ಎಂದು ಮೃತ ವಿದ್ಯಾರ್ಥಿಯ ಸಹಪಾಠಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಯು ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೊ ನಿಲ್ದಾಣದ ಫ್ಲಾಟ್‌ಫಾರ್ಮ್‌ನಿಂದ ನವೆಂಬರ್ 18ರಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಮರಣಪತ್ರವನ್ನು ಬರೆದಿರುವ ವಿದ್ಯಾರ್ಥಿ, ತನಗೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಹಲವು ಶಿಕ್ಷಕರ ಹೆಸರನ್ನು ಉಲ್ಲೇಖಿಸಿದ್ದಾನೆ.
ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೈಂಟ್ ಕೊಲಂಬಸ್ ಶಾಲೆಯ ಮೂವರು ಶಿಕ್ಷಕರಿಗೆ ಸೋಮವಾರ ಸಮನ್ಸ್ ನೀಡಲಾಗಿದೆ. ಭಾನುವಾರವೂ ಇಬ್ಬರು ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾಟಕ ಪ್ರದರ್ಶನದ ವೇಳೆ ಎಡವಿದ ಕಾರಣಕ್ಕೆ ವಿದ್ಯಾರ್ಥಿಯನ್ನು ನಿಂದಿಸಿರುವ ವಿಡಿಯೊ ಲಭ್ಯವಾದ ಕಾರಣ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.