ADVERTISEMENT

ದೆಹಲಿ ಸಂಘರ್ಷಕ್ಕೆ ಕೆರಳಿಸುವ ಟ್ವೀಟ್‌ ಕಾರಣವೇ?

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 2:45 IST
Last Updated 27 ಫೆಬ್ರುವರಿ 2020, 2:45 IST
   

ನವದೆಹಲಿ:ಪೂರ್ವ ದೆಹಲಿಯ ಜಾಫರಾಬಾದ್‌ನಲ್ಲಿ ಭಾನುವಾರ ಬೆಳಿಗ್ಗೆ ಸಿಎಎ ವಿರೋಧಿಸಿ 1,500ಕ್ಕೂ ಹೆಚ್ಚು ಜನ ಪ್ರತಿಭಟನೆ ಆರಂಭಿಸಿದ್ದರು. ಭಾನುವಾರ ಮಧ್ಯಾಹ್ನದವರೆಗೂ‍ಪ್ರತಿಭಟನೆ ಶಾಂತಿಯುತವಾಗಿಯೇ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆಗೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ನೇತೃತ್ವದಲ್ಲಿ ಜಾಫರಾಬಾದ್‌ ಬಳಿಯ ಮೌಜಪುರದಲ್ಲಿ ನೂರಾರು ಮಂದಿ ಸಿಎಎ ಪರವಾಗಿ ರ‍್ಯಾಲಿ ನಡೆಸಿದರು.

ಈ ವೇಳೆ ಕಪಿಲ್ ಮಿಶ್ರಾ ಅವರು, ‘ಇಡೀ ಮೌಜಪುರ ಸಿಎಎ ಪರ ನಿಂತಿದೆ. ಭಾರತವನ್ನು ಅಭಿವೃದ್ಧಿಪಡಿಸುವ ನಡೆಯಿಂದ ನಮ್ಮ ಹೆಜ್ಜೆಯನ್ನು ಕದಲಿಸಲು ಸಾಧ್ಯವಿಲ್ಲ. ನಿಮ್ಮ ಹೆಂಡಿರನ್ನು ರಸ್ತೆಯಲ್ಲಿ ಕೂರಿಸುವುದರಿಂದ, ಸಿಎಎ ವಾಪಸ್ ಆಗುವುದಿಲ್ಲ’ ಎಂದು ಟ್ವೀಟ್ ಮಾಡಿದರು.

ರ‍್ಯಾಲಿ ನಡೆಸದಂತೆ ಪೊಲೀಸರು ತಡೆದರು. ಆದರೆ, ‘ಸಿಎಎ ವಿರೋಧಿ ಪ್ರತಿಭಟನಕಾರರನ್ನು ತೆರವು ಮಾಡದೇ ಇದ್ದರೆ ನಾವು ಬೀದಿಗೆ ಇಳಿಯುತ್ತೇವೆ. ಮುಂದೇ ಏನೇ ಆದರೂ ನಾವು ಹೊಣೆ ಅಲ್ಲ’ ಎಂದು ಕಪಿಲ್ ಮಿಶ್ರಾ ಪೊಲೀಸ್ ಅಧಿಕಾರಿಗೆ ತಾಕೀತು ಮಾಡಿದ್ದರು ಎಂದು ಹೇಳಲಾಗಿದೆ.

ADVERTISEMENT

‘ಶಾಹೀನ್ ಬಾಗ್‌ ಮತ್ತು ದೆಹಲಿಯ ಇತರೆಡೆ ರಸ್ತೆ ಬಂದ್ ಮಾಡಿರುವವರನ್ನು ಮೂರು ದಿನಗಳಲ್ಲಿ ತೆರವು ಮಾಡಬೇಕು ಎಂದು ಪೊಲೀಸರಿಗೆ ಹೇಳುತ್ತಿದ್ದೇವೆ. ಮೂರು ದಿನಗಳಲ್ಲಿ ಅವರನ್ನು ತೆರವು ಮಾಡದಿದ್ದರೆ, ನಾವು ಬೀದಿಗೆ ಇಳಿಯುತ್ತೇವೆ. ಟ್ರಂಪ್ ಬಂದು ಹೋಗುವವರೆಗೂ ನಾವು ಸುಮ್ಮನೇ ಇರುತ್ತೇವೆ. ಆನಂತರ ನೀವು (ಪೊಲೀಸರು) ಹೇಳಿದರೂ ನಾವು ಕೇಳುವುದಿಲ್ಲ’ ಎಂದು ಕಪಿಲ್ ಮಿಶ್ರಾ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಈ ಹೇಳಿಕೆ ಇರುವ ವಿಡಿಯೊವನ್ನು ಟ್ವೀಟ್ ಮಾಡಿದರು. ಈ ಹೇಳಿಕೆಯನ್ನು ಶ್ಲಾಘಿಸಿ ಸಾವಿರಾರು ಮಂದಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ರಕ್ಷಣೆಗೆ ಧೈರ್ಯ ಮಾಡಿದ ಕಪಿಲ್ ಮಿಶ್ರಾ ಅವರನ್ನು ಬೆಂಬಲಿಸೋಣ ಎಂದು ಹಲವರು ಕರೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಹಲವರು ರಸ್ತೆಗೆ ಇಳಿದು, ಸಿಎಎ ಪರ ಘೋಷಣೆ ಕೂಗುವ ವಿಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ. ಇಂತಹ ನೂರಾರು ವಿಡಿಯೊಗಳು ಕೆಲವೇ ಗಂಟೆಗಳಲ್ಲಿ ಟ್ವೀಟ್ ಆಗಿವೆ.

ಆನಂತರ ಜಾಫರಾಬಾದ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರು ಮತ್ತು ಸಿಎಎ ಪರ ಪ್ರತಿಭಟನಕಾರರ ಮಧ್ಯೆ ಸಂಘರ್ಷ ನಡೆದಿದೆ.

ಸೋಮವಾರ ಬೆಳಿಗ್ಗೆ ಕಪಿಲ್ ಮಿಶ್ರಾ ಅವರು, ‘ಜಾಫರಾಬಾದ್‌ ಅನ್ನು ಶಾಹೀನ್ ಬಾಗ್ ಆಗಲು ಬಿಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಈ ಹೇಳಿಕೆಯನ್ನು ಬೆಂಬಲಿಸಿ ಹಲವರು ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಕಪಿಲ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಜಾಫರಾಬಾದ್‌ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ವಿಡಿಯೊವನ್ನು ಹಾಕಿ, ಸಿಎಎ ಪರ ಪ್ರತಿಭಟನಕಾರರನ್ನು ಛೇಡಿಸಿದ್ದಾರೆ.

‘ನೋಡಿ ನೋಡಿ, ಚೆನ್ನಾಗಿ ನೋಡಿ. ಜಾಫರಾಬಾದ್‌ ಅನ್ನು ಶಾಹೀನ್ ಬಾಗ್ ಮಾಡುವ ವೇದಿಕೆ ಸಿದ್ಧವಾಗುತ್ತಿದೆ. ಇಲ್ಲೂ ಈಗ ಭಾರತದ ಕಾನೂನು ಚಲಾವಣೆಗೆ ಅವಕಾಶ ಇರುವುದಿಲ್ಲ. ಶಾಹೀನ್ ಬಾಗ್ ಒಂದು ಪ್ರಯೋಗ ಎಂಬ ಮೋದಿ ಅವರ ಮಾತು ನಿಜ.
ಒಂದೊಂದು ರಸ್ತೆ, ಗಲ್ಲಿ, ಬಜಾರ್‌, ಮೊಹಲ್ಲಾಗಳಲ್ಲೂ ಈ ತಯಾರಿ ನಡೆಯುತ್ತಿದೆ.ನೀವು ಆರಾಮಾಗಿ ಸುಮ್ಮನೆ ಇರೆ. ನಿಮ್ಮ ಮನೆ ಬಾಗಿಲಿನವರೆಗೆ ಇದು ಬರುವ ತನಕ ಸುಮ್ಮನೆ ಇರಿ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಹೇಳಿಕೆಗೂ ಟ್ವಿಟರ್‌ನಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಆಗಲು ನಾವು ಬಿಡುವುದಿಲ್ಲ ಹಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.