ADVERTISEMENT

ಚರಂಡಿಯಲ್ಲೂ ಶವ...ಸುಟ್ಟ ಕಾರಿನಲ್ಲೂ ಶವ...ದೆಹಲಿ ಹಿಂಸಾಚಾರ ಸತ್ತವರ ಸಂಖ್ಯೆ 42

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 7:38 IST
Last Updated 29 ಫೆಬ್ರುವರಿ 2020, 7:38 IST
ಹಿಂಸಾಚಾರದಲ್ಲಿ ನಲುಗಿದ ದೆಹಲಿ ಈಗ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು
ಹಿಂಸಾಚಾರದಲ್ಲಿ ನಲುಗಿದ ದೆಹಲಿ ಈಗ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು   

ನವದೆಹಲಿ: ಯಾವ ಚರಂಡಿಯಲ್ಲಿ ಯಾರಶವವಿದೆಯೋ, ಯಾವ ಸುಟ್ಟ ಕಾರಿನಲ್ಲಿ ಇನ್ನಾರಶವವಿದೆಯೋ.... ಗುರುತು ಪತ್ತೆ ಹಚ್ಚಲು ಶವಾಗಾರದಲ್ಲಿ ಸಂಬಂಧಿಕರ ಸಾಲು ಸಾಲು.....

ಇದು ಈಶಾನ್ಯ ದೆಹಲಿಯಲ್ಲಿ ಶುಕ್ರವಾರ ಹಾಗೂ ಶನಿವಾರ ಕಂಡು ಬಂದ ದೃಶ್ಯಗಳು. ಕಳೆದ ಸೋಮವಾರದಿಂದ ಬುಧವಾರದವರೆಗೆ ನಡೆದ ಹಿಂಸಾಚಾರದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿದೆ. ಮೃತಪಟ್ಟವರಲ್ಲಿ ಆರು ಶವಗಳು ವಾರಸುದಾರರಿಲ್ಲದೆ, ಆಸ್ಪತ್ರೆಯ ಶವಾಗಾರದಲ್ಲಿವೆ. ಕಾಣೆಯಾದವರ ಬಗ್ಗೆ ಅಲ್ಲಲ್ಲಿ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ.ಸಂಬಂಧಿಕರು ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ.ತಂದೆ ತಾಯಿ ಬಂಧುಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಎಲ್ಲಾದರೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರಬಹುದೇಎಂದು ನಂಬಿ ಶೋಧ ನಡೆಸುತ್ತಿದ್ದಾರೆ.

ಇಲ್ಲಿನ ಗುರುತ್ಯಾಗ ಬಹದ್ದೂರ್ ಆಸ್ಪತ್ರೆ, ಜಗ್ ಪರ್ವೇಶ್ ಚಂದ್ರ ಆಸ್ಪತ್ರೆ, ಲೋಕನಾಯಕ್ ಆಸ್ಪತ್ರೆಗಳಲ್ಲಿ ಗಾಯಾಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ಗುರು ತ್ಯಾಗ ಬಹದ್ದೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿಮೂವರುಮೃತಪಟ್ಟಿದ್ದಾರೆ. ಮತ್ತೊಬ್ಬರು ಜಗ್ ಪರ್ವೇಶ್ ಚಂದ್ರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸಂಬಂಧಿಕರ ಗೊಂದಲ

ಮತ್ತೊಬ್ಬ ಕಾಣೆಯಾಗಿರುವ ಮೊಹಿಸಿನ್ ಆಲಿ (24) ಎಂಬಾತನ ಶವದ ಬಗ್ಗೆ ಕುಟುಂಬದವರು ಗೊಂದಲಕ್ಕೀಡಾಗಿದ್ದಾರೆ. ಅಪರಿಚಿತ ಶವಗಳ ಪತ್ತೆ ಕಾರ್ಯ ನಡೆಸುತ್ತಿದ್ದಾಗ ಮೊಹಿಸಿನ್ ಸಂಬಂಧಿಕ ಹಾಗೂ ಆತನ ತಂದೆ ಆಸ್ಪತ್ರೆಗೆ ಬಂದು ಗುರುತು ಹಿಡಿದಿದ್ದರು. ಕಾಗದ ಪತ್ರದ ಕೆಲಸ ಮುಗಿದ ತಕ್ಷಣ ಮೊಹಿಸಿನ್ ತಂದೆ ಇದು ನನ್ನ ಮಗನದ್ದಲ್ಲ ಎಂದು ಹೇಳಿದ್ದಾರೆ.

ನನ್ನ ಮಗ ಕಳೆದ ವಾರ ಕೂದಲು ಕ್ಷೌರ ಮಾಡಿಸಿದ್ದ, ಆದರೆ, ಈ ಶವದಲ್ಲಿ ಕೂದಲು ಉದ್ದ ಇದೆ ಎಂದಿದ್ದಾರೆ.ನಮಗೆ ಸಂಶಯ ಶುರುವಾಗಿದ್ದು, ಶವದ ತಲೆಯ ಗಾಯಕ್ಕೆ ಕಟ್ಟಲಾಗಿದ್ದ ಬ್ಯಾಂಡೇಜ್ ಬಿಚ್ಚಿದ ನಂತರ, ಶವದಲ್ಲಿ ತಲೆಕೂದಲು ಉದ್ದ ಇರುವುದು ಕಂಡು ಬಂತು. ಆದ್ದರಿಂದ ಅದು ನಮ್ಮ ಹುಡುಗನಲ್ಲ ಎಂದು ಸಂಬಂಧಿಕ ಹೈದರ್ ತಿಳಿಸಿದ್ದಾರೆ.

ಈಶಾನ್ಯ ದೆಹಲಿಯ ಚರಂಡಿಗಳಲ್ಲಿ ಮೂರು ಶವಗಳನ್ನು ಹೊರತೆಗೆದಿರುವ ಪೊಲೀಸರು ಶವಪರೀಕ್ಷೆಗೆ ಕಳುಹಿಸಿದ್ದಾರೆ.

ಸುಟ್ಟು ಕರಕಲಾಗಿದ್ದಕಾರಿನಿಂದ ಮತ್ತೊಂದುಶವಹೊರತೆಗೆದಿರುವ ಪೊಲೀಸರು ಅದರ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ ನಡೆಸಿದ್ದಾರೆ. ವರದಿಬಂದ ನಂತರ ಯಾರ ಶವ ಎಂಬುದು ಪತ್ತೆಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.ಮುಬಾರಕ್ ಎಂಬಾತ ಕಳೆದ ಸೋಮವಾರದಿಂದ ಕಾಣೆಯಾಗಿದ್ದು, ಆಸ್ಪತ್ರೆಯಲ್ಲಿ ಆತನ ಶವವೆಂದು ಗುರುತು ಮಾಡಿದ್ದನ್ನು ನೋಡಿದ ಸಂಬಂಧಿಕ ಚಾಂದ್ ರಿಜ್ವಿ ಎಂಬುವರು ಇದು ಆತನ ಶವವಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.