ADVERTISEMENT

ತ್ವರಿತ ವಿಚಾರಣೆ: ಹೈಕೋರ್ಟ್‌ಗೆ ‘ಸುಪ್ರೀಂ’ ಸೂಚನೆ

ದೆಹಲಿ ಗಲಭೆ: ದ್ವೇಷ ಭಾಷಣದ ಆರೋಪದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌ ಕೋರಿರುವ ಅರ್ಜಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:45 IST
Last Updated 4 ಮಾರ್ಚ್ 2020, 19:45 IST

ನವದೆಹಲಿ: ‘ದ್ವೇಷ ಭಾಷಣ ಮಾಡಿರುವ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು’ ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ. ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಇತರ ಅರ್ಜಿಗಳ ಜತೆಗೆ ಇದನ್ನೂ ಪರಿಗಣಿಸಿ, ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳುವಂತೆ ನಿರ್ದೇಶಿಸಲಾಗಿದೆ.

ವಿಚಾರಣೆಯನ್ನು ಏಪ್ರಿಲ್‌ 13ಕ್ಕೆ ಹೈಕೋರ್ಟ್‌ ಮುಂದೂಡಿರುವುದು ಸಮರ್ಥನೀಯ ಅಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಹೇಳಿದೆ.

ಗಲಭೆ ಸಂತ್ರಸ್ತರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಾಲಿನ್‌ ಗೊನ್ಸಾ ಲ್ವೆಸ್‌ ಅವರು ಬಿಜೆಪಿ ಮುಖಂಡರ ಪ್ರಚೋದನಾಕಾರಿ ಭಾಷಣದ ಅಂಶಗಳನ್ನು ಪ್ರಸ್ತಾಪಿಸಿದರು.

ADVERTISEMENT

‘ಎರಡೂ ಕಡೆಯವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದಿಲ್ಲ. ಎಫ್‌ಐಆರ್‌ ಸಲ್ಲಿಕೆಯಾದ ಮಾತ್ರಕ್ಕೆ ಅವರ ಹಕ್ಕುಗಳ ಬಗ್ಗೆ ಯಾವ ಪೂರ್ವಗ್ರಹವೂ ಉಂಟಾಗುವುದಿಲ್ಲ. ಪರಿಸ್ಥಿತಿ ಶಾಂತವಾಗಿರುವಾಗ ಎಫ್‌ಐಆರ್‌ ದಾಖಲಿಸುವುದು ದೊಡ್ಡ ಸಮಸ್ಯೆ ಆಗದು’ ಎಂದು ಪೀಠವು ಹೇಳಿತು.

ಬಿಜೆಪಿ ಮುಖಂಡರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾ, ಕಪಿಲ್‌ ಮಿಶ್ರಾ ಮತ್ತು ಅಭಯ್‌ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್‌ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇವರು ಮಾಡಿದ್ದ ದ್ವೇಷ ಭಾಷಣವೇ ದೆಹಲಿಯ ಗಲಭೆಗೆ ಕಾರಣ ಎಂದು ಆರೋಪಿಸಿದ್ದರು.

ಫೆ. 27ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ವಿಚಾರಣೆಯನ್ನು ಏಪ್ರಿಲ್‌ 13ಕ್ಕೆ ಮುಂದೂಡಿತ್ತು. ಮಂದರ್‌ ಅವರ ಅರ್ಜಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿತ್ತು.

ಪರಿಹಾರ ತಪ್ಪಲ್ಲ:‘ದೆಹಲಿಯಲ್ಲಿ ನಡೆದ ಗಲಭೆಯಿಂದ ಸಂತ್ರಸ್ತರಾದವರಿಗೆ ಎಎಪಿ ನೇತೃತ್ವದ ಸರ್ಕಾರವು ಪರಿಹಾರ ನೀಡಲು ತೀರ್ಮಾನಿಸಿರುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ.

ಗಲಭೆ ಸಂತ್ರಸ್ತರಿಗೆ ಪರಿಹಾರ ನೀಡುವುದನ್ನು ಪ್ರಶ್ನಿಸಿ ಬಿಜೆಪಿಯ ಮುಖಂಡ, ಮಾಜಿ ಶಾಸಕ ನಂದಕಿಶೋರ್‌ ಗರ್ಗ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಮತ್ತು ಸಿ. ಹರಿಶಂಕರ್‌ ಅವರನ್ನೊಳಗೊಂಡ ಪೀಠವು, ‘ಇದು ಸರ್ಕಾರದ ನೀತಿಗೆ ಸಂಬಂಧಿಸಿದ ನಿರ್ಧಾರ, ಅದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ’ ಎಂದಿದೆ.

‘ಗಲಭೆಗೆ ಪ್ರಚೋದನೆ ನೀಡಿದವರೇ ಪರಿಹಾರವನ್ನೂ ಪಡೆಯುವಂತಾಗಬಾರದು. ಅದಕ್ಕಾಗಿ, ಪರಿಹಾರದ ಹಣವನ್ನು ನೀಡುವುದಕ್ಕೂ ಮೊದಲೇ ಸಂತ್ರಸ್ತರ ಹೆಸರನ್ನು ಪ್ರಕಟಿಸಬೇಕು’ ಎಂದು ಗರ್ಗ್‌ ವಾದಿಸಿದ್ದರು.

ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯವು, ‘ದೂರುದಾರರ ಈ ಸಲಹೆಯನ್ನು ಒಪ್ಪಿದರೆ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವೇ ಆಗಲಾರದು. ಸರ್ಕಾರದ ಈ ಯೋಜನೆಯು ಗಲಭೆಯಿಂದ ಸಂತ್ರಸ್ತರಾದವರಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನಾವು ಬಯಸುತ್ತೇವೆ’ ಎಂದಿದೆ.

ಮಂದರ್‌ ವಿರುದ್ಧ ವಿಚಾರಣೆ

ಹರ್ಷ ಮಂದರ್‌ ಅವರು 2019ರ ಡಿಸೆಂಬರ್‌ನಲ್ಲಿ ಮಾಡಿದ್ದಾರೆ ಎನ್ನಲಾದ ಭಾಷಣವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಪೀಠವು ನಿರ್ಧರಿಸಿದೆ. ಎನ್‌ಆರ್‌ಸಿ, ಅಯೋಧ್ಯೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾನವೀಯತೆ, ಸಮಾನತೆ ಮತ್ತು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ವಿಫಲವಾಗಿದೆ. ಹಾಗಾಗಿ, ದೇಶದ ಭವಿಷ್ಯವನ್ನು ನಿರ್ಧರಿಸಲು ಜನರು ಬೀದಿಗೆ ಬರಬೇಕು ಎಂದು ಮಂದರ್‌ ಕರೆಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

‘ಈ ನ್ಯಾಯಾಲಯದ ಬಗ್ಗೆ ನಿಮ್ಮ ಅಭಿಪ್ರಾಯ ಇದು ಎಂದಾದರೆ, ಅದನ್ನು ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ’ ಎಂದು ಪೀಠವು ಹೇಳಿತು. ಆದರೆ, ಮಂದರ್‌ ಅವರ ವಕೀಲೆ ಕರುಣಾ ನಂದಿ ಅವರು ಇದನ್ನು ಅಲ್ಲಗಳೆದರು. ಮಂದರ್‌ ಅವರು ಇಂತಹ ಭಾಷಣವನ್ನೇ ಮಾಡಿಲ್ಲ ಎಂದ ಅವರು, ಭಾಷಣದ ದೃಶ್ಯಗಳಿರುವ ವಿಡಿಯೊವನ್ನು ಪರಿಶೀಲಿಸಲು ಸಮಯ ಬೇಕು ಎಂದರು. ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಮಂದರ್‌ ಅವರ ಭಾಷಣದ ವಿಡಿಯೊವನ್ನು ಉಲ್ಲೇಖಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಮಂದರ್‌ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ವಿಡಿಯೊ ಮತ್ತು ಅದರಲ್ಲಿರುವ ವಿಚಾರಗಳು ನೈಜ ಎಂದು ಸ್ಪಷ್ಟವಾಗುವ ತನಕ ಮಂದರ್‌ ಅವರ ವಿಚಾರಣೆ ನಡೆಸುವುದಿಲ್ಲ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.