ADVERTISEMENT

ದೆಹಲಿಯಲ್ಲಿ ಯಾರಿಗೆ ಹೆಚ್ಚು ಅಧಿಕಾರ ಸಿಗಬೇಕು? ಸುಪ್ರೀಂ ತೀರ್ಪಿಗೆ ಎಎಪಿ ಆಕ್ರೋಶ

ಅಧಿಕಾರಿಗಳ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 4:10 IST
Last Updated 15 ಫೆಬ್ರುವರಿ 2019, 4:10 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾನತಾಡಿದರು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದ್ದಾರೆ–ಪಿಟಿಐ ಚಿತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾನತಾಡಿದರು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದ್ದಾರೆ–ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಯಾರಿಗೆ ಹೆಚ್ಚು ಅಧಿಕಾರ ಸಿಗಬೇಕು ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಿಂದ ಗುರುವಾರ ಭಿನ್ನ ತೀರ್ಪು ಹೊರಬಂದಿದೆ. ಆದರೆ ಒಟ್ಟಾರೆಯಾಗಿ ಕೇಂದ್ರದ ಕೈಗೆ ಹೆಚ್ಚಿನ ಅಧಿಕಾರಗಳನ್ನು ನೀಡಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಸೇರಿದಂತೆ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರದ್ದೇ ಕೊನೆಯ ಮಾತು ಎಂದು ತೀರ್ಪು ಅಂತಿಮಗೊಳಿಸಿದ ಇಬ್ಬರು ನ್ಯಾಯಮೂರ್ತಿಗಳು, ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದರು.

ಕೇಂದ್ರ ಸರ್ಕಾರ ನೇಮಕ ಮಾಡುವ ಅಧಿಕಾರಿಗಳು ಎಎಪಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಆಮ್ ಆದ್ಮಿ ಪಕ್ಷಕ್ಕೆ ನ್ಯಾಯಾಲಯದ ತೀರ್ಪು ಬೇಸರ ತರಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರ ಪೀಠದ ತೀರ್ಪು ದುರದೃಷ್ಟಕರ ಎಂದು ಎಎಪಿ ವ್ಯಾಖ್ಯಾನಿಸಿದೆ.

ADVERTISEMENT

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕೇಜ್ರಿವಾಲ್ ನೇತೃತ್ವದ ದೆಹಲಿ ರಾಜ್ಯ ಸರ್ಕಾರಗಳ ನಡುವೆ ಕಲಹಕ್ಕೆ ಕಾರಣವಾಗಿದ್ದ 6ರ ಪೈಕಿ ಐದು ವಿಷಯಗಳಲ್ಲಿ ಪೀಠ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಷ್ಟೇ ಸಾಧ್ಯವಾಗಿದ್ದು, ಉಳಿದ ಒಂದನ್ನು ವಿಸ್ತೃತ ಪೀಠದ ವಿವೇಚನೆಗೆ ಒಪ್ಪಿಸಿದೆ.

ತೀರ್ಪಿನಲ್ಲಿ ಭಿನ್ನತೆ ಏನು?

ಆಡಳಿತಾತ್ಮಕ ವಿಷಯಗಳಲ್ಲಿ ಯಾರ ಕೈ ಮೇಲಾಗಬೇಕು ಎಂಬ ವಿಷಯದಲ್ಲಿ ಇಬ್ಬರು ನ್ಯಾಯಮೂರ್ತಿಗಳು ಬೇರೆ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದರು. ಆಡಳಿತಾತ್ಮಕ ಸೇವೆಗಳ ಮೇಲೆ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿ ಭೂಷಣ್ ಸ್ಪಷ್ಟ ತೀರ್ಪು ನೀಡಿದರು. ಆದರೆ ನ್ಯಾಯಮೂರ್ತಿ ಸಿಕ್ರಿ ಅವರು ನೀಡಿದ ತೀರ್ಪು ಇದಕ್ಕೆ ವ್ಯತಿರಿಕ್ತವಾಗಿತ್ತು.

‘ಜಂಟಿ ನಿರ್ದೇಶಕರು ಮತ್ತು ಅದಕ್ಕಿಂತ ಮೇಲಿನ ಹುದ್ದೆಯ ಅಧಿಕಾರಿಗಳನ್ನು (ಗ್ರೇಡ್1– ಮತ್ತು ಗ್ರೇಡ್–2) ವರ್ಗಾಯಿಸುವ ಅಥವಾ ನಿಯೋಜಿಸುವ ಅಧಿಕಾರ ಕೇಂದ್ರ ಸರ್ಕಾರದ್ದು. ಕೆಳಗಿನ ಶ್ರೇಣಿಯ ಅಧಿಕಾರಿಗಳ (ಗ್ರೇಡ್–3 ಮತ್ತು ಗ್ರೇಡ್–4) ವರ್ಗಾವಣೆ ಅಥವಾ ನಿಯೋಜನೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಒಂದು ವೇಳೇ ಗೊಂದಲ ಉಂಟಾದಲ್ಲಿ, ಲೆಫ್ಟಿನೆಂಟ್ ಗವರ್ನರ್ ತೆಗೆದುಕೊಳ್ಳುವ ತೀರ್ಮಾನಕ್ಕೇ ಮಾನ್ಯತೆ ಇರುತ್ತದೆ’ ಎಂದು ನ್ಯಾಯಮೂರ್ತಿ ಸಿಕ್ರಿ ಹೇಳಿದರು.

ಗ್ರೇಡ್–3 ಮತ್ತು ಗ್ರೇಡ್–4 ಅಧಿಕಾರಿಗಳ ವರ್ಗಾವಣೆ, ನಿಯೋಜನೆಗೆ ಪ್ರತ್ಯೇಕ ಮಂಡಳಿಯೊಂದನ್ನು ರಚಿಸುವಂತೆ ಅವರು ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ಸುಗಮ ಆಡಳಿತ ನಡೆಸುವ ಸಲುವಾಗಿ, ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರ ವರ್ಗಾವಣೆ ಮತ್ತು ನಿಯೋಜನೆಯನ್ನು ಲೆಫ್ಟಿನೆಂಟ್ ಗವರ್ನರ್ ನಿರ್ವಹಿಸಬಹುದು. ಆದರೆ ಪ್ರಕರಣವು ಡಾನಿಕ್ಸ್ (ದೆಹಲಿ, ಅಂಡಮಾನ್ ಮತ್ತು ನಿಕೊಬಾರ್ ನಾಗರಿಕ ಸೇವೆಗಳು) ಮತ್ತು ಡಾನಿಪ್ಸ್ (ದೆಹಲಿ, ಅಂಡಮಾನ್ ಮತ್ತು ನಿಕೊಬಾರ್ ಪೊಲೀಸ್ ಸೇವೆಗಳು) ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದ್ದರೆ,ಕಡತವನ್ನು ಮಂತ್ರಿ ಪರಿಷತ್ತು ಲೆಫ್ಟಿನೆಂಟ್ ಗವರ್ನರ್‌ಗೆ ಕಳುಹಿಸಬೇಕು. ಇಲ್ಲಿಯೂ ಲೆಫ್ಟಿನೆಂಟ್ ಗವರ್ನರ್ ತೀರ್ಮಾನವೇ ಅಂತಿಮ ಎಂದು ನ್ಯಾಯಮೂರ್ತಿ ಸಿಕ್ರಿ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವುದರಲ್ಲಿ ಒಮ್ಮತ?

ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿಹಿಡಿರುವ ಪೀಠ, ಭ್ರಷ್ಟಾಚಾರ ತಡೆ ಸಂಸ್ಥೆ (ಎಸಿಬಿ) ಮೇಲೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ನೀಡಿದೆ. ಜೊತೆಗೆತನಿಖಾ ಸಂಸ್ಥೆಗಳನ್ನು ನೇಮಿಸುವ ಅಧಿಕಾರವನ್ನೂ ಕೊಟ್ಟಿದೆ.ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ತನಿಖೆಗೊಳಪಡಿಸುವ ಅಧಿಕಾರವುದೆಹಲಿ ಸರ್ಕಾರದ ಅಧೀನದಲ್ಲಿರುವ ಎಸಿಬಿಗೆ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಅಂತಿಮವಾಗಿ, ಜನರ ಸೇವೆಗೆ ಪರಸ್ಪರ ಸಹಕಾರ ಅಗತ್ಯ ಎಂದು ಪೀಠ ಕಿವಿಮಾತು ಹೇಳಿತು.

ಕೇಂದ್ರ ಸರ್ಕಾರಕ್ಕೆ ಸಿಕ್ಕಿದ್ದು

*ಜಂಟಿ ಕಾರ್ಯದರ್ಶಿ ಶ್ರೇಣಿ ಹಾಗೂ ಅದಕ್ಕೂ ಮೇಲಿನ ಅಧಿಕಾರಿಗಳ ವರ್ಗಾವಣೆ, ನಿಯೋಜನೆ

*ತನಿಖಾ ಆಯೋಗಗಗಳ ರಚನೆ ಅಧಿಕಾರ ಕೇಂದ್ರ ಸರ್ಕಾರಕ್ಕೆ.

*ಭ್ರಷ್ಟಾಚಾರ ತಡೆ ಸಂಸ್ಥೆಯ (ಎಸಿಬಿ) ಮೇಲೆ ಲೆಫ್ಟಿನೆಂಟ್ ಗವರ್ನರ್‌ ನಿಯಂತ್ರಣ. ಕೇಂದ್ರ ಸರ್ಕಾರಿ ಅಧಿಕಾರಿಗಳ ಎಸಿಬಿ ವಿಚಾರಣೆ ನಡೆಸುವಂತಿಲ್ಲ.

ದೆಹಲಿ ಸರ್ಕಾರಕ್ಕೆ ಸಿಕ್ಕಿದ್ದು

*ಸರ್ಕಾರಿ ವಕೀಲರ ನೇಮಕ ಅಧಿಕಾರ

*ವಿದ್ಯುತ್‌ ಮಂಡಳಿ ನಿಯಂತ್ರಣ ಅಧಿಕಾರ

*ಕೃಷಿ ಜಮೀನುಗಳ ಬೆಲೆನಿರ್ಧರಿಸುವ ಅಧಿಕಾರ

===

ಇದ್ಯಾವ ರೀತಿಯ ತೀರ್ಪು?

‘ಯಾವ ರೀತಿಯ ಪ್ರಜಾಪ್ರಭುತ್ವ ಇದು? ಯಾವ ರೀತಿಯ ತೀರ್ಪು ಇದು? ನ್ಯಾಯಾಲಯದ ಆದೇಶ ಕೇವಲ ದೆಹಲಿ ಜನರಿಗೆ ಮಾತ್ರವಲ್ಲ, ಸಂವಿಧಾನದ ವಿರುದ್ಧವೇ ಬಂದಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಒಂದು ಚುನಾಯಿತ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದಾದರೆ ಸರ್ಕಾರ ಕಾರ್ಯ ನಿರ್ವಹಿಸುವುದಾದರೂ ಹೇಗೆ?’

–ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

––––

ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ದೆಹಲಿ ಸರ್ಕಾರದ ಅಧಿಕಾರಗಳ ವಿಚಾರದಲ್ಲಿ ಅಸ್ಪಷ್ಟತೆಗಳನ್ನು ತೀರ್ಪು ನಿವಾರಣೆ ಮಾಡಿದೆ. ಕೋರ್ಟ್ ತೀರ್ಪನ್ನು ದೆಹಲಿ ಸರ್ಕಾರವ ವಿನಮ್ರತೆಯಿಂದ ಒಪ್ಪಿಕೊಂಡು ರಾಜಧಾನಿಗೆ ಉತ್ತಮ ಆಡಳಿತ ನೀಡಬೇಕು

–ವಿಜೇಂದ್ರ ಗುಪ್ತಾ ಸಲಹೆ,ದೆಹಲಿ ವಿಧಾನಸಭೆಯ ವಿರೋಧಪಕ್ಷದ ನಾಯಕ

––––

ಸಂವಿಧಾನದ ಪ್ರಕಾರ, ದೆಹಲಿ ಸರ್ಕಾರಕ್ಕೆ ಸಂಪೂರ್ಣ ಅಧಿಕಾರಗಳಿಲ್ಲ. ಹಲವು ವಿಚಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಗೃಹಸಚಿವಾಲಯಕ್ಕೆ ಅಧಿಕಾರಗಳಿವೆ.

–ಶೀಲಾ ದೀಕ್ಷಿತ್, ದೆಹಲಿಯ ಮಾಜಿ ಮುಖ್ಯಮಂತ್ರಿ

–––––

ಸುಪ್ರೀಂಕೋರ್ಟ್ ತೀರ್ಪನ್ನು ಕೇಜ್ರಿವಾಲ್ ಅವರು ಟೀಕಿಸಿರುವುದು ರಾಜಕೀಯ ಇತಿಹಾಸದಲ್ಲಿ ಸುಪ್ರೀಂಕೋರ್ಟ್ ಮೇಲಿನ ಅತಿದೊಡ್ಡ ದಾಳಿ. ನ್ಯಾಯಾಲಯವನ್ನು ನಿಂದಿಸಿದ್ದಕ್ಕೆ ಕೇಜ್ರಿವಾಲ್ ಕ್ಷಮೆ ಕೇಳಬೇಕು.

–ಸಂಬೀತ್ ಪಾತ್ರಾ, ಬಿಜೆಪಿ ಮುಖಂಡ

===

ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವೇ ಚುನಾವಣಾ ಅಜೆಂಡಾ

ದೆಹಲಿಯಲ್ಲಿ ಅಧಿಕಾರ ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಆಮ್ ಆದ್ಮಿ ಪಕ್ಷಕ್ಕೆ ಬೇಸರ ತರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನದ ಬೇಡಿಕೆ ಮುಂದಿಟ್ಟು ಬರುವ ಚುನಾವಣೆಯಲ್ಲಿ ಬೃಹತ್ ಅಭಿಯಾನ ಹಮ್ಮಿಕೊಳ್ಳಲು ಎಎಪಿ ಮುಂದಾಗಿದೆ.

ದೆಹಲಿಯ ಎಲ್ಲಾ 7 ಲೋಕಸಭಾ ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಆರಿಸಿ ಲೋಕಸಭೆಗೆ ಕಳುಹಿಸಿದರೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪೂರ್ಣಪ್ರಮಾಣದ ರಾಜ್ಯಕ್ಕಾಗಿ ಹೋರಾಡಲು ನೆರವಾಗುತ್ತದೆ ಎಂದು ಎಎಪಿ ಅಭಿಯಾನ ನಡೆಸಲಿದೆ.

ದೆಹಲಿ ವಿಧಾನಸಭೆಯ 70 ಶಾಸಕರ ಪೈಕಿ 67 ಸದಸ್ಯರು ಪಕ್ಷದವರೇ ಆಗಿದ್ದರೂ ಒಬ್ಬ ಜವಾನನನ್ನೂ ವರ್ಗಾವಣೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಕಡತಗಳನ್ನು ವಿಲೇವಾರಿ ಮಾಡಿಸಿಕೊಳ್ಳಲಿಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ನಿವಾಸದ ಎದುರು ಧರಣಿ ನಡೆಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂಬ ವಿಷಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಎಎಪಿ ನಿರ್ಧರಿಸಿದೆ.

‘ಈ ಚುನಾವಣೆಯನ್ನು ಪ್ರಧಾನಿ ಆಯ್ಕೆಯ ದೃಷ್ಟಿಯಿಂದ ಮಾತ್ರ ನೋಡಬೇಡಿ. ಎಲ್ಲ ಏಳು ಸ್ಥಾನಗಳನ್ನು ನಮಗೆ ಕೊಟ್ಟರೆ, ಲೋಕಸಭೆಯಲ್ಲಿ ನಮ್ಮ ದನಿಗೆ ಬೆಲೆ ಇರುತ್ತದೆ. 67 ಶಾಸಕರಿದ್ದೂ ನಮಗೆ ಒಂದು ವರ್ಗಾವಣೆ ಮಾಡುವ ಅಧಿಕಾರವಿಲ್ಲ. ಆದರೆ ಕೇವಲ 3 ಸ್ಥಾನವಿರುವ ಬಿಜೆಪಿ ಅದನ್ನು ಮಾಡುತ್ತಿದೆ’ ಎಂದು ಕೇಜ್ರಿವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಧಿಕಾರ ಚಲಾವಣೆ ವಿಚಾರದಲ್ಲಿ ತನ್ನ ಕೈಕಟ್ಟಿಹಾಕಿರುವುದಕ್ಕೆ ತೀವ್ರ ಬೇಸರಗೊಂಡಿರುವ ಎಎಪಿ, ಚುನಾವಣೆಯಲ್ಲಿ ತೀವ್ರ ಹೋರಾಟ ನಡೆಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.