ADVERTISEMENT

ದೆಹಲಿ ಯುವತಿ ಅಪಘಾತ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ: ವರದಿ

ಏಜೆನ್ಸೀಸ್
Published 3 ಜನವರಿ 2023, 10:46 IST
Last Updated 3 ಜನವರಿ 2023, 10:46 IST
   

ನವದೆಹಲಿ: ಹೊಸ ವರ್ಷದಂದು ನಗರದ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ನಡೆದ ಯುವತಿ ಅಪಘಾತ ಪ್ರಕರಣದಲ್ಲಿ ಅತ್ಯಾಚಾರ ಸೇರಿದಂತೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಶವ ಪರೀಕ್ಷಾ ತಂಡದ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಮಹಿಳೆಯ ‘ಖಾಸಗಿ ಭಾಗಗಳಿಗೆ ಯಾವುದೇ ಗಾಯಗಳಾಗಿಲ್ಲ’ ಎಂದು ಶವ ಪರೀಕ್ಷಾ ವರದಿ ಹೇಳಿದ್ದು, ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಬಹುದು ಎಂದು ಮೂಲಗಳು ತಿಳಿಸಿವೆ.

ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ವೈದ್ಯರ ಮಂಡಳಿಯು ಶವ ಪರೀಕ್ಷೆ ನಡೆಸಿದ್ದು, ‌ಮಂಗಳವಾರ ಸಂಜೆಯೊಳಗೆ ಪೊಲೀಸರಿಗೆ ವರದಿ ಸಲ್ಲಿಸಬಹುದು ಎಂದು ಮೂಲಗಳು ಹೇಳಿವೆ.

ADVERTISEMENT

ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ 20 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದು, ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 13 ಕಿ.ಮೀ.ವರೆಗೂ ಎಳೆದೊಯ್ದಿರುವ ಘಟನೆ ದೆಹಲಿಯ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿತ್ತು. ಮಾರುತಿ ಬಲೆನೊ ಕಾರಿನಲ್ಲಿದ್ದ ಐವರನ್ನು ಬಂಧಿಸಿದ ದೆಹಲಿ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದರು.

ಮೃತ ಯುವತಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮಾರುತಿ ಬಲೆನೊ ಕಾರು ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಾಗ ಸ್ನೇಹಿತೆ ಕೂಡ ಆಕೆಯ ಜೊತೆಗಿದ್ದರು. ಘಟನೆಯಲ್ಲಿ ಸ್ನೇಹಿತೆಗೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ಯುವತಿ ಕಾಲು ಕಾರಿನ ಆಕ್ಸಲ್‌ನಲ್ಲಿ ಸಿಲುಕಿಕೊಂಡಿದ್ದು, ಕಾರಿನೊಂದಿಗೆ ಆಕೆಯನ್ನು ಎಳೆದುಕೊಂಡು ಹೋಗಿದೆ ಎಂದು ಮೂಲಗಳು ಹೇಳಿವೆ. ಪ್ರತ್ಯಕ್ಷದರ್ಶಿ ನಿಧಿಯನ್ನು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಿಂದ ದೆಹಲಿ ರಣರಂಗವಾಗಿದ್ದು ರಾಜಕೀಯ ಕೆಸರೆರಚಾಟಗಳು ಆರಂಭವಾಗಿದ್ದವು. ಯುವತಿ ಅತ್ಯಾಚಾರ ಮಾಡಿ ಅಪಘಾತದ ನಾಟಕ ಮಾಡುತ್ತಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ರಸ್ತೆಯ ಮೇಲೆ ಯುವತಿಯ ಮೃತದೇಹ ನಗ್ನಾವಸ್ಥೆಯಲ್ಲಿ ಬಿದ್ದಿರುವ, ಆಕೆಯ ಕಾಲುಗಳು ಮುರಿದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿತ್ತು.

ಅಜಾಗರೂಕ ಚಾಲನೆ ಘಟನೆಗೆ ಕಾರಣ. ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವ ಯಾವುದೇ ರೀತಿಯ ಸಾಕ್ಷ್ಯಗಳು ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.