ಚೈತನ್ಯಾನಂದ ಸರಸ್ವತಿಯನ್ನು ಬಂಧಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು
–ಪಿಟಿಐ ಚಿತ್ರ
ನವದೆಹಲಿ: ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ 17 ಮಂದಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಪಟಿಯಾಲ ನ್ಯಾಯಾಲಯ ಆದೇಶ ನೀಡಿದೆ.
62 ವರ್ಷದ ಚೈತನ್ಯಾನಂದ ವಿರುದ್ಧ ಆಗಸ್ಟ್ 4ರಂದು ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ, ಆಶ್ರಮದಿಂದ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಚೈತನ್ಯಾನಂದ ಅವರನ್ನು ಆಗ್ರಾದ ಹೋಟೆಲ್‌ನಲ್ಲಿ ಪೊಲೀಸರು ಬಂಧಿಸಿದ್ದರು.
‘ಚೈತನ್ಯಾನಂದ ಅವರ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ, ಆಗ್ರಾದ ತಾಜ್ ಗಂಜ್ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಅವರು ತಂಗಿರುವುದು ಖಚಿತಪಟ್ಟ ಬಳಿಕ ಭಾನುವಾರ ಬೆಳಿಗ್ಗೆ 3:30ರ ವೇಳೆಗೆ ಬಂಧಿಸಲಾಗಿದೆ’ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ನೈಋತ್ಯ ದೆಹಲಿಯಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ಮಾಜಿ ಮುಖ್ಯಸ್ಥರಾಗಿದ್ದ ಸರಸ್ವತಿ ಅವರ ವಸತಿಗೃಹಕ್ಕೆ ಭೇಟಿ ನೀಡುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದರು. ಅಲ್ಲದೇ, ಅವರ ಚಲನವಲನಗಳ ಮೇಲೆ ಮೊಬೈಲ್‌ನ ಮೂಲಕವೇ ನಿಗಾ ಇಡುತ್ತಿದ್ದರು’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.