ADVERTISEMENT

ನವದೆಹಲಿ: ಪೊಲೀಸರ ಬಲೆಗೆ ಬಿದ್ದ ಗಂಡನನ್ನು ಕೊಂದು ಆತ್ಮಹತ್ಯೆ ಎಂದಿದ್ದ ಮಹಿಳೆ

ಪಿಟಿಐ
Published 21 ಆಗಸ್ಟ್ 2020, 3:35 IST
Last Updated 21 ಆಗಸ್ಟ್ 2020, 3:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತನ್ನ ಸಹಚರನೊಂದಿಗೆ ಸೇರಿ ಗಂಡನನ್ನು ಕೊಂದಿರುವ 30 ವರ್ಷದ ಮಹಿಳೆಯೊಬ್ಬರು, ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳುವ ಮೂಲಕ ತನಿಖಾಧಿಕಾರಿಗಳ ದಾರಿತಪ್ಪಿಸಲು ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಹಿಳೆ ಮತ್ತು ಪತಿಗೆ 20 ವರ್ಷ ವಯಸ್ಸಿನ ಅಂತರವಿತ್ತು ಮತ್ತು ದಂಪತಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಮದುವೆಯಿಂದಾಗಿ ಬೇಸರಗೊಂಡಿದ್ದ ಆಕೆಯು ವೀರು ಬರ್ಮಾ ಮತ್ತು ಕರಣ್ ಎಂಬಾತನೊಂದಿಗೆ ಸೇರಿ ತನ್ನ ಗಂಡನನ್ನು ಕೊಲ್ಲುವ ಯೋಜನೆ ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ಮಾರೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದ ಆಕೆ, ಆತನನ್ನು ಮದುವೆಯಾಗಲು ಬಯಸಿದ್ದಳು. ಕರಣ್ ಮಹಿಳೆ ಮತ್ತು ಅವಳ ಪತಿಯೊಂದಿಗೆ ಬುದ್ಧ ವಿಹಾರ್ ಪ್ರದೇಶದ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದ. ಮಹಿಳೆಯ ಪತಿ ಮಾಯಾಪುರಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಿದ್ದೆ ಮಾತ್ರೆಗಳನ್ನು ನೀಡಿದ ಬಳಿಕ ಮಹಿಳೆ, ಕರಣ್ ಸಹಾಯದಿಂದ ಗಂಡನ ಕತ್ತು ಹಿಸುಕಿದ್ದಾಳೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಆತ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದಾಳೆ. ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆಯ ಮನೆಗೆ ತಲುಪಿದ ಪೊಲೀಸರಿಗೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸೂಚಿಸುವ ಯಾವುದೇ ಪುರಾವೆಗಳು ದೊರೆತಿಲ್ಲ. ಕರಣ್ ಮತ್ತು ಮಹಿಳೆಯ ಹೇಳಿಕೆಗಳು ಕೂಡ ವಿಭಿನ್ನವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯು ಬರ್ಮನನ್ನು ಮದುವೆಯಾಗಲು ಮತ್ತು ತನ್ನ ಗಂಡನ ಆಸ್ತಿಯನ್ನು ಪಡೆಯಲು ಈ ಕೃತ್ಯ ಎಸಗಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.