ADVERTISEMENT

ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್‌ ಪರಿಣಾಮ ಹೆಚ್ಚು: ಎನ್‌.ಕೆ ಅರೋರಾ

ಪಿಟಿಐ
Published 27 ಜೂನ್ 2021, 16:44 IST
Last Updated 27 ಜೂನ್ 2021, 16:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಕೊರೊನಾ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರ ತಳಿಯನ್ನು ಶ್ವಾಸಕೋಶದ ಅಂಗಾಂಶಗಳು ಹೆಚ್ಚು ಆಕರ್ಷಿಸುತ್ತವೆ. ಹೀಗಾಗಿ ಅದರ ಮೇಲೆ ವೈರಸ್‌ನ ಪರಿಣಾಮ ಹೆಚ್ಚು. ಆದರೆ ಇದರಿಂದ ಗಂಭೀರ ಅನಾರೋಗ್ಯ ಉಂಟಾಗುತ್ತದೆ ಎಂದು ಹೇಳಲಾಗದು.’ ಹೀಗೆಂದು ಕೊರೊನಾ ವೈರಸ್ ಕಾರ್ಯ ಪಡೆ ಮುಖ್ಯಸ್ಥ ಡಾ. ಎನ್. ಕೆ. ಅರೋರಾ ಹೇಳಿದ್ದಾರೆ.

ಕೊರೊನಾ ವೈರಸ್‌ನ ರೂಪಾಂತರವಾದ ಡೆಲ್ಟಾ ಪ್ಲಸ್ ಜೂನ್ 11 ರಂದು ಮೊದಲ ಬಾರಿಗೆ ಪತ್ತೆಯಾಯಿತು. ಡೆಲ್ಟಾ ಪ್ಲಸ್‌ ಅನ್ನು ಆತಂಕಕಾರಿ ಎಂದು ವರ್ಗೀಕರಿಸಲಾಗಿದೆ.

ದೇಶದ 12 ರಾಜ್ಯಗಳಲ್ಲಿ ಒಟ್ಟು 51 ಡೆಲ್ಟಾ ಪ್ಲಸ್‌ ತಳಿಯ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ.

ADVERTISEMENT

ಡೆಲ್ಟಾ ಪ್ಲಸ್ ಶ್ವಾಸಕೋಶದ ಮ್ಯೂಕೋಸಲ್ ಪದರಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕೊರೊನಾದ ಇತರೆ ತಳಿಗಳಿಗೆ ಹೋಲಿಸಿದರೆ ಇದು ಹೆಚ್ಚೇ. ಆದರೆ ಅದು ಹಾನಿಯನ್ನುಂಟುಮಾಡುತ್ತದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಗಂಭೀರ ಆರೋಗ್ಯ ಸಮಸ್ಯೆ ಸೃಷ್ಟಿ ಮಾಡುತ್ತದೆ ಎಂದಲ್ಲ. ಅಥವಾ ವೇಗವಾಗಿ ಹರಡಲು ಕಾರಣವಾಗುತ್ತದೆ ಎಂದೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಪ್ರಕರಣಗಳು ಪತ್ತೆಯಾದಂತೆ, ಅವುಗಳನ್ನು ಅಧ್ಯಯನ ಮಾಡಿದಂತೆ ಅದರ ಸ್ಪಷ್ಟ ಪರಿಣಾಮಗಳು ತಿಳಿಯುತ್ತವೆ. ಅದರೆ, ಕೋವಿಡ್‌ನ ಲಸಿಕೆಗಳನ್ನು ಜನರಿಗೆ ನೀಡುತ್ತಿರುವುದರಿಂದ ಕೋವಿಡ್‌ ಪ್ರಕರಣಗಳಲ್ಲಿ ಗುಣಲಕ್ಷಣಗಳು ಸೌಮ್ಯವಾಗುತ್ತಾ ಹೋಗುತ್ತವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.