ADVERTISEMENT

ಅಸಂಘಟಿತ ವಲಯದ ಮೇಲೆ ನಡೆದ ದಾಳಿಯೇ ನೋಟು ರದ್ಧತಿ: ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 3 ಸೆಪ್ಟೆಂಬರ್ 2020, 11:01 IST
Last Updated 3 ಸೆಪ್ಟೆಂಬರ್ 2020, 11:01 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ಅಧಿಕ ಮೌಲ್ಯದ ನೋಟುಗಳ ರದ್ಧತಿ ಕ್ರಮವು ದೇಶದಲ್ಲಿ ಅಸಂಘಟಿತ ವಲಯದ ಮೇಲೆ ನಡೆದ ದಾಳಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅರ್ಥವ್ಯವಸ್ಥೆಯನ್ನು ಪೂರ್ವಸ್ಥಿತಿಗೆ ತರಲು ಸಂಘಟಿತ ಹೋರಾಟ ಅಗತ್ಯ ಎಂದು ಅವರು ಹೇಳಿದ್ದಾರೆ.

ನೋಟು ರದ್ಧತಿಯು ದೇಶದಲ್ಲಿನ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ನಡೆದ ದಾಳಿಯೂ ಹೌದು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ ತನ್ನ ಎರಡನೇ ವಿಡಿಯೊದಲ್ಲಿ ಆರ್ಥಿಕತೆ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ನಗದು ರಹಿತ ಆರ್ಥಿಕತೆ ಮಾಡಲು ಬಯಸಿದ್ದಾರೆ. ಆದರೆ ಬಡವರು, ರೈತರು, ಸಣ್ಣ ಉದ್ದಿಮೆದಾರರು ವಹಿವಾಟಿಗಾಗಿ ನಗದನ್ನೇ ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

2016ರ ನವೆಂಬರ್ 8ರಂದು ಪ್ರಧಾನಿಯವರು ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಗೊಳಿಸಿದರು. ಪರಿಣಾಮ, ಇಡೀ ದೇಶದ ಜನರು ತಮ್ಮ ಉಳಿತಾಯದ ಮೊತ್ತವನ್ನು ಠೇವಣಿ ಇಡಲು ಬ್ಯಾಂಕುಗಳ ಮುಂದೆ ಸಾಲುಗಟ್ಟಿದರು. ಆದರೆ, ಈ ನಿರ್ಧಾರವು ಕಪ್ಪು ಹಣ ಪಿಡುಗನ್ನೂ ನಿವಾರಿಸಲಿಲ್ಲ ಅಥವಾ ಬಡವರಿಗೂ ನೆರವಾಗಲಿಲ್ಲ ಎಂದು ಅವರು ಟೀಕಿಸಿದ್ದಾರೆ.

ಆದರೆ, ಇದರ ಲಾಭ ಆಗಿದ್ದು ಯಾರಿಗೆ? ದೊಡ್ಡ ದೊಡ್ಡ ಜನರಿಗೆ, ಕೋಟ್ಯಧೀಶರಿಗೆ. ನೀವು ಠೇವಣಿ ಇಟ್ಟ ಹಣವನ್ನು ಬ್ಯಾಂಕ್ ನಿಂದ ಪಡೆದುಕೊಂಡ ಸರ್ಕಾರ ಇಂಥ ದೊಡ್ಡ ಜನರು ಮಾಡಿದ್ದ ಸಾಲ ಮನ್ನಾ ಮಾಡಲು ಬಳಸಿಕೊಂಡಿತು ಎಂದು ಅವರು ದೂರಿದ್ದಾರೆ.

ಇನ್ನೊಂದೆಡೆ, ವ್ಯವಸ್ಥೆಯಿಂದ ನಗದು ಬಳಕೆ ಹಿಂತೆಗೆದುಕೊಳ್ಳಲಾಯಿತು. ನಮ್ಮ ಅಸಂಘಟಿತ ವಲಯವು ಮುಖ್ಯವಾಗಿ ನಗದು ವಹಿವಾಟು ಅವಲಂಬಿಸಿದೆ. ಅವರು ಸಣ್ಣ ವ್ಯಾಪಾರಿಗಳೇ ಆಗಿರಬಹುದು ಅಥವಾ ರೈತರು, ಕಾರ್ಮಿಕರೇ ಆಗಿರಬಹುದು. ಇದರಿಂದಾಗಿ ಈ ವರ್ಗವೂ ದೊಡ್ಡ ಪರಿಣಾಮ ಎದುರಿಸಬೇಕಾಯಿತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.