ADVERTISEMENT

ಗುರ್ಮೀತ್ ರಾಮ್‌ ರಹೀಮ್‌ಗೆ 40 ದಿನಗಳ ಪೆರೋಲ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 15:18 IST
Last Updated 22 ಜನವರಿ 2023, 15:18 IST
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ 
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌    

ಚಂಡೀಗಢ/ಬಾಗ್ಪತ್‌: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ದೇರಾ ಸಚ್ಛಾ ಸೌದದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಶನಿವಾರ 40 ದಿನಗಳ ಪೆರೋಲ್‌ ನೀಡಿದ ಹಿನ್ನೆಲೆಯಲ್ಲಿ ಹರಿಯಾಣಾದ ರೋಹ್ಟಕ್‌ ಜೈಲಿನಿಂದ ಅವರು ಹೊರಬಂದರು. ದತ್ತುಪುತ್ರಿ ಹನಿಪ್ರೀತ್‌ ಜೊತೆ ಉತ್ತರ ಪ್ರದೇಶದ ಬಾಗ್ಪತ್‌ ಜಿಲ್ಲೆಯ ಬರ್ನಾವಾ ಆಶ್ರಮಕ್ಕೆ ಬಂದು ತಲುಪಿದರು.

ಸುಮಾರು 6 ಬೆಂಗಾವಲು ವಾಹನಗಳ ಜೊತೆ ಅವರು ಆಶ್ರಮ ತಲುಪಿದರು. ಅವರು ಆಶ್ರಮದ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ದ್ವಾರಗಳನ್ನು ಮುಚ್ಚಲಾಯಿತು.

‘ಕಾನೂನು ಪ್ರಕಾರ ಗುರ್ಮೀತ್‌ಗೆ 40 ದಿನಗಳ ಪೆರೋಲ್‌ ನೀಡಲಾಗಿದೆ’ ಎಂದು ರೋಹ್ಟಕ್‌ ವಿಭಾಗೀಯ ಆಯುಕ್ತ ಸಂಜೀವ್‌ ವರ್ಮಾ ಶುಕ್ರವಾರ ತಿಳಿಸಿದ್ದರು. ಜನವರಿ 25ರಂದು ನಡೆಯಲಿರುವ ದೇರಾ ಮುಖ್ಯಸ್ಥ ಶಾ ಸತ್ನಾಮ್‌ ಸಿಂಗ್‌ ಜಯಂತಿಯಲ್ಲೂ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ADVERTISEMENT

ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಅವರಿಗೆ 40 ದಿನಗಳ ಪೆರೋಲ್‌ ನೀಡಲಾಗಿತ್ತು. ಗುರ್ಮೀತ್‌ಗೆ ಪೆರೋಲ್‌ ನೀಡಿರುವುದನ್ನು ಶಿರೋಮಣಿ ಅಕಾಲಿ ದಳ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ ತೀವ್ರವಾಗಿ ಖಂಡಿಸಿವೆ.

ಆಶ್ರಮದ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣದಲ್ಲಿ ಗುರ್ಮೀತ್‌ಗೆ 20 ವರ್ಷಗಳ ಸಜೆ ವಿಧಿಸಲಾಗಿತ್ತು. ದೇರಾ ವ್ಯವಸ್ಥಾಪಕರೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಗುರ್ಮೀತ್‌ ಮತ್ತು ಇತರ ನಾಲ್ವರ ವಿರುದ್ಧ ದೋಷ ಸಾಬೀತಾಗಿತ್ತು. ಪತ್ರಕರ್ತರೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ 2019ರಲ್ಲಿ ದೋಷ ಸಾಬೀತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.