ADVERTISEMENT

ಕೋವಿಡ್ ಸವಾಲುಗಳ ನಡುವೆಯೂ ನಡೆಯಲಿದೆ ಹರಿದ್ವಾರ 'ಕುಂಭಮೇಳ': ಉತ್ತರಾಖಂಡ ಸಿಎಂ

ಏಜೆನ್ಸೀಸ್
Published 23 ನವೆಂಬರ್ 2020, 1:37 IST
Last Updated 23 ನವೆಂಬರ್ 2020, 1:37 IST
ಪ್ರಯಾಗ್‌ರಾಜ್‌ನಲ್ಲಿ 2019ರಲ್ಲಿ ನಡೆದ ಕುಂಭಮೇಳದಲ್ಲಿ ಪವಿತ್ರಸ್ನಾನ ಮಾಡುತ್ತಿರುವ ಭಕ್ತಾದಿಗಳು
ಪ್ರಯಾಗ್‌ರಾಜ್‌ನಲ್ಲಿ 2019ರಲ್ಲಿ ನಡೆದ ಕುಂಭಮೇಳದಲ್ಲಿ ಪವಿತ್ರಸ್ನಾನ ಮಾಡುತ್ತಿರುವ ಭಕ್ತಾದಿಗಳು   

ಡೆಹ್ರಾಡೂನ್‌: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಹಲವು ಸಮಸ್ಯೆಗಳ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ 'ಕುಂಭಮೇಳ' ನಡೆಯಲಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಪುನರುಚ್ಚರಿಸಿದ್ದಾರೆ.

2021ರ ಜನವರಿ 14ರಿಂದ ಕುಂಭಮೇಳೆ ಆರಂಭವಾಗಲಿದೆ. ಅದರ ಸಿದ್ಧತೆಗೆ ಸಂಬಂಧಿಸಿದಂತೆ ಅಖಿಲ ಭಾರತೀಯ ಅಖಾಡಾ ಪರಿಷತ್ (ಎಬಿಎಪಿ) ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ರಾವತ್‌ ಅವರು ಭಾನುವಾರ ಸಭೆ ನಡೆಸಿದರು.

'ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳು ಕುಂಭಮೇಳದ ಸಿದ್ಧತೆಯ ಕಾರ್ಯಗಳ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಸಹ 15 ದಿನಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ಕೈಗೊಳ್ಳಲಿದ್ದಾರೆ. ಕೋವಿಡ್‌–19 ಪರಿಸ್ಥಿತಿಯನ್ನು ಆಧರಿಸಿ ಕುಂಭಮೇಳದ ವಿಸ್ತಾರ ನಿರ್ಧರಿಸಲಾಗುತ್ತದೆ. ಎಬಿಎಪಿ ಹಾಗೂ ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಪರಿಗಣಿಸಲಾಗುತ್ತದೆ, ಜನರಿಗೆ ಯಾವುದೇ ತೊಡಕಾಗದಂತೆ ಗಮನಿಸಲಾಗುತ್ತದೆ' ಎಂದು ಸಿಎಂ ರಾವತ್‌ ಹೇಳಿದ್ದಾರೆ.

ADVERTISEMENT

ಕುಂಭಮೇಳದಲ್ಲಿ ನಿತ್ಯ 35ರಿಂದ 50 ಲಕ್ಷ ಜನರು ಗಂಗಾ ನದಿಯಲ್ಲಿ ಪವಿತ್ರಸ್ನಾನ ಮಾಡುವ ನಿರೀಕ್ಷೆ ಇದೆ.

ಕುಂಭಮೇಳಕ್ಕಾಗಿಯೇ ನಿರ್ಮಿಸಲಾಗುತ್ತಿರುವ ಒಂಬತ್ತು ಹೊಸ ಘಾಟ್‌ಗಳು (ನದಿ ತೀರಗಳು), ಎಂಟು ಸೇತುವೆಗಳು ಹಾಗೂ ರಸ್ತೆಗಳ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ಸ್ವಚ್ಛತೆಗೆ ವಿಶೇಷ ಕಾಳಜಿವಹಿಸಲಾಗುತ್ತಿದೆ. ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆ ಹಾಗೂ ಅತಿಕ್ರಮ ಪ್ರವೇಶವನ್ನು ತಡೆಯುವ ಕಾರ್ಯಗಳು ನಡೆದಿವೆ. ಬಹುತೇಕ ಕಾಮಗಾರಿಗಳು ಡಿಸೆಂಬರ್‌ 15ಕ್ಕೆ ಪೂರ್ಣಗೊಳ್ಳಲಿವೆ' ಎಂದು ಕುಂಭಮೇಳದ ಅಧಿಕಾರಿ ದೀಪಕ್‌ ರಾವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.