ADVERTISEMENT

ಬಂಧನ ಕೇಂದ್ರ ಸ್ಥಾಪಿಸಿದ್ದೇ ಕಾಂಗ್ರೆಸ್, ರಾಹುಲ್ ಸುಳ್ಳರ ಮುಖ್ಯಸ್ಥ: ಬಿಜೆಪಿ

ಭಾರತೀಯ ಮುಸ್ಲಿಮರಿಗೆ ಯಾವುದೇ ಭಯ ಇಲ್ಲ, ಆದರೂ ಸುಳ್ಳು ಹರಡುತ್ತಿದ್ದಾರೆ: ಸಂಬಿತ್ ಪಾತ್ರ

ಏಜೆನ್ಸೀಸ್
Published 26 ಡಿಸೆಂಬರ್ 2019, 13:08 IST
Last Updated 26 ಡಿಸೆಂಬರ್ 2019, 13:08 IST
ರಾಹುಲ್ ಗಾಂಧಿ (ಪಿಟಿಐ ಚಿತ್ರ)
ರಾಹುಲ್ ಗಾಂಧಿ (ಪಿಟಿಐ ಚಿತ್ರ)   

ನವದೆಹಲಿ: ಬಂಧನ ಶಿಬಿರಗಳ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಬಿಜೆಪಿ, 'ಪ್ರಧಾನ ಮಂತ್ರಿಯು ಭಾರತ ಮಾತೆಗೇ ಸುಳ್ಳು ಹೇಳುತ್ತಿದ್ದಾರೆ'ಎಂದು ಆರೋಪಿಸಿದ ರಾಹುಲ್ ಗಾಂಧಿ ವಿರುದ್ಧ ತಿರುಗಿಬಿದ್ದಿದೆ.

ಅಸ್ಸಾಂನ ಮಾಟಿಯಾದಲ್ಲಿ ಬಂಧನ ಕೇಂದ್ರವಿದೆ ಎಂದು ರಾಹುಲ್ ಗಾಂಧಿ ಅವರು ಒಂದು ವಿಡಿಯೊವನ್ನು ಟ್ವೀಟ್ ಮಾಡಿದ್ದರು ಮತ್ತು 'ಈ ಬಂಧನ ಶಿಬಿರಗಳ ಬಗ್ಗೆ ಕಾಂಗ್ರೆಸ್ ಹಾಗೂ ನಗರ ನಕ್ಸಲರು ಎಬ್ಬಿಸಿರುವ ಪುಕಾರು ಒಂದು ಅತಿದೊಡ್ಡ ಸುಳ್ಳು' ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯ ಭಾಗವನ್ನೂ ತೋರಿಸಲಾಗಿತ್ತು. "ಆರೆಸ್ಸೆಸ್‌ನ ಪ್ರಧಾನ ಮಂತ್ರಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆ" ಎಂದು ವಿಡಿಯೊಗೆ ಅಡಿಬರಹ ನೀಡಲಾಗಿತ್ತು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ಈ ಬಂಧನ ಕೇಂದ್ರಗಳ ಕುರಿತು ಅಪಪ್ರಚಾರ ನಡೆಸುತ್ತಿದೆ ಮತ್ತು ರಾಹುಲ್ ಗಾಂಧಿ ಅವರು ಸುಳ್ಳರ ಕೂಟದ ಮುಖ್ಯಸ್ಥ ಎಂದು ಟೀಕಿಸಿದೆ.

ADVERTISEMENT

ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಹೇಳಿದ್ದು, ಪ್ರಧಾನಮಂತ್ರಿಯನ್ನು ಸುಳ್ಳುಗಾರ ಎಂದು ಕರೆಯುವ ಮೂಲಕ ರಾಹುಲ್ ಗಾಂಧಿ ತಪ್ಪೆಸಗಿದ್ದಾರೆ ಎಂದರು.

ಪ್ರಧಾನಿ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿದ ಅವರು, "ಬಿಜೆಪಿ ಆಳ್ವಿಕೆಯಲ್ಲಿ ಎನ್‌ಆರ್‌ಸಿ ಅಡಿಯಲ್ಲಿ ಯಾವುದೇ ಭಾರತೀಯ ಮುಸ್ಲಿಮರನ್ನು ಸೆರೆಯಲ್ಲಿರಿಸಲು ಯಾವುದೇ ಬಂಧನ ಶಿಬಿರಗಳಿಲ್ಲ" ಎಂದು ಮೋದಿ ಹೇಳಿರುವುದರಲ್ಲಿ ಸುಳ್ಳೇನಿದೆ ಎಂದು ಕೇಳಿದರು.

ಬಂಧನ ಕೇಂದ್ರಗಳ ಬಗ್ಗೆ ರಾಹುಲ್ ಗಾಂಧಿಯೇ ಸುಳ್ಳು ಹರಡುತ್ತಿದ್ದಾರೆ. ಮುಸ್ಲಿಮರನ್ನು ಬಂಧಿಸಿ, ಗಡೀಪಾರು ಮಾಡಲಾಗುತ್ತದೆ ಎಂದು ರಾಹುಲ್ ಮತ್ತು ಕಾಂಗ್ರೆಸ್ ಮುಖಂಡರು ಅಪಪ್ರಚಾರ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿಯವರೇ ಸುಳ್ಳರ ಪಡೆಯ ಮುಖ್ಯಸ್ಥ ಎಂದು ಟೀಕಿಸಿದ ಸಂಬಿತ್ ಪಾತ್ರ, ಅಸ್ಸಾಂನಲ್ಲಿ ಮೂರು ಬಂಧನ ಕೇಂದ್ರಗಳನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ನಿರ್ಮಿಸಿತ್ತು ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಅವರು 2011ರಲ್ಲಿ ಯುಪಿಎ ಸರ್ಕಾರದ ಗೃಹ ಸಚಿವಾಲಯವು ಸಂಸತ್ತಿನಲ್ಲಿ ನೀಡಿದ್ದ ಉತ್ತರದ ಪ್ರತಿಯೊಂದನ್ನು ತೋರಿಸಿದ್ದು, ಅದರಲ್ಲಿ, ಅಸ್ಸಾಂನ ಗೋಲ್‌ಪಾರ, ಕೋಖ್ರಜಾರ್ ಮತ್ತು ಸಿಲ್ಚಾರ್‌ಗಳಲ್ಲಿ ಮೂರು ಬಂಧನ ಕೇಂದ್ರಗಳನ್ನು ನಿರ್ಮಿಸಲಾಗಿದೆ, ಇದರಲ್ಲಿ 362 ಮಂದಿಯನ್ನು ಇರಿಸಲಾಗಿದೆ ಎಂದು ತಿಳಿಸಲಾಗಿತ್ತು.

"ಸುಳ್ಳರ ಮುಖ್ಯಸ್ಥರನ್ನು ನಾನೀಗ ಕೇಳುತ್ತಿದ್ದೇನೆ, ಈಗಲಾದ್ರೂ ದೇಶದ ಕ್ಷಮೆ ಯಾಚಿಸುತ್ತೀರಾ? ರಾಹುಲ್ ಗಾಂಧಿಗೆ ಯಾವುದೇ ವಿಷಯದ ಬಗ್ಗೆ ಏನೂ ಜ್ಞಾನವಿಲ್ಲ, ಆದರೂ ಎಲ್ಲದರ ಬಗ್ಗೆ ಮಾತನಾಡುತ್ತಾರೆ" ಎಂದು ಸಂಬಿತ್ ಪಾತ್ರ ಆರೋಪಿಸಿದರು.

ಎನ್‌ಆರ್‌ಸಿಗೂ ಬಂಧನ ಕೇಂದ್ರಗಳಿಗೂ ಯಾವುದೇ ಸಂಬಂಧ ಇಲ್ಲ. ಬಂಧನ ಕೇಂದ್ರಗಳಿರುವುದು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವರು ದೇಶದೊಳಗೆ ತಿರುಗಾಡುತ್ತಾ ಎಲ್ಲೋ ಅವಿತುಕೊಳ್ಳದಂತಿರುವುದಕ್ಕೆ ಮಾತ್ರ ಎಂದು ಸಂಬಿತ್ ಹೇಳಿದರು.

ಭಾನುವಾರದ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಮುಸ್ಲಿಮರಿಗೆ ಅಭಯ ನೀಡಿದ್ದು, "ನಿಮ್ಮ ಶಿಕ್ಷಣವನ್ನಾದರೂ ಗೌರವಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಏನೆಂದು ಸರಿಯಾಗಿ ಓದಿಕೊಳ್ಳಿ. ನೀವು ಸುಶಿಕ್ಷಿತರು. ತಲೆಮಾರುಗಳಿಂದ ಭಾರತದಲ್ಲಿರುವವರ ಪುತ್ರರಾದ ಭಾರತದ ಮಣ್ಣಿನ ಮುಸಲ್ಮಾನರು ಎನ್‌ಆರ್‌ಸಿ ಅಥವಾ ಸಿಎಎ ಬಗ್ಗೆ ಚಿಂತೆಯೇ ಮಾಡಬೇಕಿಲ್ಲ. ಬಂಧನ ಕೇಂದ್ರಗಳೂ ಇಲ್ಲ, ಭಾರತೀಯ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದೂ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.