ADVERTISEMENT

'ಆಪರೇಷನ್ ಸಿಂಧೂರ', ಬಿನ್ ಲಾಡೆನ್ ಕೊಲೆಗೆ ಸಾಮ್ಯತೆಯಿದೆ: ಉಪರಾಷ್ಟ್ರಪತಿ ಧನಕರ್

ಪಿಟಿಐ
Published 17 ಮೇ 2025, 11:37 IST
Last Updated 17 ಮೇ 2025, 11:37 IST
   

ನವದೆಹಲಿ: ಅಮೆರಿಕವು ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಕೊಂದಿದ್ದಕ್ಕೂ ಹಾಗೂ ಪಹಲ್ಗಾಮ್‌ ಉಗ್ರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತ ಮಾಡಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಗೂ ಬಹಳಷ್ಟು ಸಾಮ್ಯತೆಯಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

ಅಮೆರಿಕವು, 9/11 ದಾಳಿಯ ನಂತರ ಆ ಘಟನೆಯ ಮಾಸ್ಟರ್ ಮೈಂಡ್‌ನನ್ನು ಹುಡುಕಿಕೊಂಡು ಹೋಗಿ ಕೊಂದ ರೀತಿಯಲ್ಲೇ, ಪಹಲ್ಗಾಮ್‌ ಘಟನೆಯ ನಂತರ ಭಾರತವು ಪಾಕಿಸ್ತಾನದೊಳಕ್ಕೆ ನುಗ್ಗಿ ಉಗ್ರರ ಅಡಗು ತಾಣಗಳನ್ನು ನಾಶಮಾಡಿದೆ ಎಂದರು.

ಜಗತ್ತಿಗೆ ತಿಳಿಯುವಂತೆ ಭಾರತವು ಪ್ರತೀಕಾರ ತೀರಿಸಿಕೊಂಡಿದೆ. ಶಾಂತಿ ಒಪ್ಪಂದದ ಜೊತೆಗೆ, ಭಯೋತ್ಪಾದನೆಯ ವಿರುದ್ಧ ಕೂಡ ದಾಳಿ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡವನ್ನು ಹುಟ್ಟುಹಾಕಿದೆ ಎಂದು ಹೇಳಿದರು.

ADVERTISEMENT

ಇದೇ ಮೊದಲ ಬಾರಿಗೆ ಪಾಕಿಸ್ತಾನದೊಳಗಿರುವ ಜೈಷ್-ಎ-ಮೊಹಮ್ಮದ್ ಹಾಗು ಲಷ್ಕರ್-ಎ-ತಯಬಾ(ಎಲ್‌ಇಟಿ) ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಘಟನೆಯಲ್ಲಿ ಉಗ್ರಗಾಮಿಗಳು ಮಾತ್ರ ಮೃತರಾಗಿದ್ದಾರೆ ಎಂದರು.

ಪಹಲ್ಗಾಮ್‌ ಭಯೋತ್ಪಾದಕ ಕೃತ್ಯವು, ಮುಂಬೈ ಮೇಲಿನ ಉಗ್ರ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದಕ ಕೃತ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.